Sunday, 15th December 2024

ಪಾಂಡ್ಯ ಸ್ಫೋಟಕ ಅರ್ಧಶತಕ, ಶಿಖರ್‌ ಸಮರ್ಥ ಸಾಥ್‌

ಸಿಡ್ನಿ: ಆಸೀಸ್‌ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟುತ್ತಿರುವ ಟೀಂ ಇಂಡಿಯಾ ಪಡೆಗೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕ ಶಿಖರ್‌ ಧವನ್‌ ಹೊರತುಪಡಿಸಿ, ಅಗ್ರ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು.

ಕನ್ನಡಿಗರಾದ ಮಯಾಂಕ್‌ ಅಗರ್ವಾಲ್‌ ಹಾಗೂ ಕೆ.ಎಲ್‌.ರಾಹುಲ್‌ ತಮ್ಮ ವೈಯಕ್ತಿಕ ಮೊತ್ತ 22, 12 ರನ್‌ ಗಳಿಸಿ ವಿಕೆಟ್‌ ಕಳೆದು ಕೊಂಡರು. ನಾಯಕ ವಿರಾಟ್‌ ಕೊಹ್ಲಿ ಕೂಡ 21 ಎಸೆತದಲ್ಲಿ ಅಷ್ಟೇ ರನ್ ಪೇರಿಸಿದರು. ಆಲ್ರೌಂಡರ್‌ ಹಾರ್ದಿಕ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಅರ್ಧಶತಕ ಬಾರಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಆರಂಭಿಕ ಶಿಖರ್‌ ಧವನ್ ಹಾಗೂ ಪಾಂಡ್ಯ ಅರ್ಧಶತಕ ಬಾರಿಸಿದ್ದು, ಇನ್ನಿಂಗ್ಸ್ ಮುಂದುವರೆಸಿದ್ದಾರೆ. ಪಾಂಡ್ಯ ಅವರ ಬ್ಯಾಟಿನಿಂದ ನಾಲ್ಕು ಸಿಕ್ಸರ್‌ ಹಾಗೂ ಮೂರು ಬೌಂಡರಿ ಹರಿದು ಬಂದಿತ್ತು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್‌ 374 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಡೇವಿಡ್ ವಾರ್ನರ್‌ ಅರ್ಧಶತಕ ಮತ್ತು ನಾಯಕ ಆರನ್‌ ಫಿಂಚ್‌ ಹಾಗೂ ಸ್ಟೀವನ್ ಸ್ಮಿತ್‌ ಶತಕ ಬಾರಿಸಿದರು. ಕೊನೆಯಲ್ಲಿ ಸ್ಪೋಟಕ ಆಟಗಾರ ಗ್ಲೆನ್‌ ಮ್ಯಾಕ್ಸ್’ವೆಲ್ 19 ಎಸೆತಗಳಲ್ಲಿ 45 ರನ್‌ ಪೇರಿಸಿ, ತಂಡದ ಮೊತ್ತ 350 ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.