Saturday, 23rd November 2024

Paralympics 2024: ಪ್ಯಾರಾಲಿಂಪಿಕ್ಸ್‌ನಲ್ಲಿ 8ನೇ ಪದಕ ಗೆದ್ದ ಭಾರತ; ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಗೆದ್ದ ಯೋಗೇಶ್‌

Paralympics 2024

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನಲ್ಲಿ(Paralympics 2024) ಭಾರತ 8ನೇ ಪದಕಕ್ಕೆ ಗುರಿಯಿಟ್ಟಿದೆ. ಸೋಮವಾರ ನಡೆದ ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ(Yogesh Kathuniya) 42.22 ದೂರ ಡಿಸ್ಕಸ್ ಎಸೆದು  ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 27 ವರ್ಷದ ಯೋಗೇಶ್ ತಾವೆಸೆದ ಅತ್ಯುತ್ತಮ ಎಸೆತ ಇದಾಗಿದೆ. ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್‌ ದೂರ ಎಸೆದು ನಾಲ್ಕನೇ ಸ್ಥಾನ ಪಡೆದರು. ಸೆರ್ಬಿಯಾದ ನೆಬೊಜ್ಸಾ ಎರಿಕ್ ಅರ್ಹತೆ ಪಡೆದರೂ ಫೈನಲ್‌ನಲ್ಲಿ ಭಾಗವಹಿಸಲಿಲ್ಲ.

ದಿಲ್ಲಿಯಲ್ಲಿ 1997ರಲ್ಲಿ ಹುಟ್ಟಿದ ಯೋಗೇಶ್‌ ಕಾಥುನಿಯ ಬಿಕಾಂ ಪದವೀ­ಧರ. ಇವರ ತಂದೆ ಗ್ಯಾನ್‌ಚಂದ್ರ ಕಾಥುನಿಯ ಯೋಧ. ಯೋಗೇಶ್‌ ಕೇವಲ 8 ವರ್ಷದವರಿದ್ದಾಗ ಅಪರೂಪದ ನರದೌರ್ಬಲ್ಯಕ್ಕೆ ತುತ್ತಾದರು. ವೈದ್ಯಕೀಯ ಭಾಷೆಯಲ್ಲಿ ಅದನ್ನು ಗಿಲಿಯನ್‌ ಬಾರ್‌ ಸಿಂಡ್ರೋಮ್‌ (ಪಾರ್ಶ್ವವಾಯು) ಎನ್ನುತ್ತಾರೆ. ಪರಿಣಾಮ ಸೊಂಟದಿಂದ ಕೆಳಗ್ಗೆ ನಿಶ್ಶಕ್ತವಾಯಿತು. ನಡೆಯಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದರು. ಅವರ ತಾಯಿ ಮೀನಾ ದೇವಿ ಮಗನಿಗಾಗಿ ಫಿಸಿಯೊಥೆರಪಿ ಕಲಿತರು. ಪರಿಣಾಮ ಮುಂದಿನ ಮೂರು ವರ್ಷಗಳ ಅನಂತರ ಯೋಗೇಶ್‌ ನಡೆಯಲು ಆರಂಭಿಸಿದ್ದರು.

https://x.com/sportwalkmedia/status/1830534406756614396

ಪದಕ ಖಾತ್ರಿಪಡಿಸಿದ ತುಳಸಿಮತಿ 

ಸೋಮವಾರ ಬೆಳಗ್ಗೆ ನಡೆದ ಮಹಿಳೆಯರ ಎಸ್‌ಯು5 ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವೊಂದನ್ನು ಖಾತ್ರಿ ಪಡಿಸಿದ್ದಾರೆ. ಜತೆಗೆ ಭಾರತಕ್ಕೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 9ನೇ ಪದಕವೊಂದು ಖಾತರಿಯಾಗಿದೆ. ಈಗಾಗಲೇ ಭಾರತ ೮ ಪದಕ ಜಯಿಸಿ ಸದ್ಯ ಪದಕಪಟ್ಟಿಯಲ್ಲಿ 30ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ತುಳಸಿಮತಿ ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಮನೀಷಾ ರಾಮದಾಸ್‌ ವಿರುದ್ಧ ತುಳಸಿಮತಿ 23-21, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಸೋಲು ಕಂಡ ಮನೀಷಾ ಇನ್ನು ಕಂಚಿನ ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್. ತುಳಸಿಮತಿ ಫೈನಲ್‌ನಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ, ಚೀನಾದ ಯಾಂಗ್ ಕಿಯು ಕ್ಸಿಯಾ ವಿರುದ್ಧ ಚಿನ್ನಕ್ಕಾಗಿ ಸೆಣಸಾಡಲಿದ್ದಾರೆ. ಶನಿವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ತುಳಸಿಮತಿ ಮುರುಗೇಶನ್‌ ಪೋರ್ಚುಗಲ್‌ನ ಬೀಟ್ರಿಝ್ ಮಾಂಟೀರೊ ಅವರನ್ನು 21-12, 21-8 ಅಂತರದಿಂದ ಪರಾಭವಗೊಳಿಸಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ಭಾನುವಾರ ರಾತ್ರಿ ನಡೆದ ಪುರುಷರ ಹೈಜಂಪ್ ಟಿ47 ವಿಭಾಗದ ಸ್ಪರ್ಧೆಯಲ್ಲಿ ನಿಶಾದ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಪದಕ ಗೆದ್ದ ಭಾರತದ 8ನೇ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು. ಪ್ಯಾರಾ ಓಟಗಾರ್ತಿ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದರು. 23 ವರ್ಷದ ಪ್ರೀತಿ ಮಹಿಳೆಯರ 200 ಮೀ, ಟಿ35 ವಿಭಾಗದಲ್ಲಿ 30.01 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟಿದ್ದರು. ಇದಕ್ಕೂ ಮೊದಲು ಶುಕ್ರವಾರ ಪ್ರೀತಿ ಮಹಿಳೆಯರ 100 ಮೀ, ಟಿ35 ವಿಭಾಗದಲ್ಲಿ 14.21 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಪಾತ್ರರಾಗಿದ್ದರು.