Thursday, 12th December 2024

ಪ್ಯಾಟ್ ಕಮಿನ್ಸ್ ಟಿ20 ಕ್ರಿಕೆಟ್‌ ನಲ್ಲಿ ಚೊಚ್ಚಲ ಅರ್ಧ ಶತಕ

ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಪ್ಯಾಟ್ ಕಮಿನ್ಸ್ ಟಿ20 ಕ್ರಿಕೆಟ್‌ ನಲ್ಲಿ ಚೊಚ್ಚಲ ಅರ್ಧ ಶತಕ ಬಾರಿಸಿದ್ದಾರೆ. ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 32ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಮಿನ್ಸ್ ಅರ್ಧ ಶತಕ ಸಿಡಿಸಿದ್ದಾರೆ.

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಏಳನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕಮಿನ್ಸ್, ನಾಯಕ ಇಯಾನ್ ಮಾರ್ಗನ್ ಜೊತೆ ಉತ್ತಮ ಜೊತೆಯಾಟ ನೀಡಿದರು. 36 ಎಸೆತಗಳಿಗೆ ಅಜೇಯ 53 ರನ್ ಬಾರಿಸಿದರು. ಇದರಲ್ಲಿ 2 ಸಿಕ್ಸರ್ ಮತ್ತು 5 ಫೋರ್‌ಗಳು ಸೇರಿದ್ದವು.

ಬ್ಯಾಟಿಂಗ್ ಆಯ್ದುಕೊಂಡಿದ್ದ ಕೋಲ್ಕತ್ತಾದಿಂದ ರಾಹುಲ್ ತ್ರಿಪಾಠಿ 7, ಶುಬ್‌ಮನ್ ಗಿಲ್ 21, ಇಯಾನ್ ಮಾರ್ಗನ್ 39, ಆಯಂದ್ರೆ ರಸೆಲ್ 12, ಕಮಿನ್ಸ್ 53 ರನ್ ಸೇರಿಸಿದರು. ಕೆಕೆಆರ್ 20 ಓವರ್‌ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತು.

ಆಸ್ಟ್ರೇಲಿಯಾದ ಬಲಗೈ ವೇಗಿ ಆಗಿರುವ ಪ್ಯಾಟ್ ಕಮಿನ್ಸ್ 30 ಟೆಸ್ಟ್ ಪಂದ್ಯಗಳಲ್ಲಿ 143 ವಿಕೆಟ್, 67 ಏಕದಿನ ಪಂದ್ಯಗಳಲ್ಲಿ 108, 30 ಟಿ20ಐ ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ.