ಮುಂಬಯಿ: ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತಮ್ಮನ್ನು ಯಾವ ತಂಡಗಳೂ ಖರೀದಿಸದ ಕುರಿತು ಕೆಲವು ಸಾಮಾಜಿಕ ಬಳಕೆದಾರರು ಟ್ರೋಲ್ ಮಾಡುತ್ತಿರುವ ಬಗ್ಗೆ ಟೀಮ್ ಇಂಡಿಯಾದ ಬ್ಯಾಟರ್ ಪೃಥ್ವಿ ಶಾ(Prithvi Shaw) ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಮಾಡುವ ಕೆಲಸದಿಂದ ಆಗಬಹುದಾದ ಪರಿಣಾಮ, ಅಪಾಯ, ಒಳಿತು-ಕೆಡುಕಿನ ಬಗ್ಗೆ ಯಾರು ಚಿಂತಿಸುವುದೇ ಇಲ್ಲ ಎಂದು ಪೃಥ್ವಿ ಶಾ ಹೇಳಿದ್ದಾರೆ.
ʼಕೆಲವರು ನನ್ನನ್ನು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲವನ್ನು ನಾನು ಗಮನಿಸುತ್ತಿದ್ದೇನೆ. ನಾನೇನು ತಪ್ಪು ಮಾಡಿದ್ದೇನೆ. ಟ್ರೋಲ್ ಮಾಡುವಾಗ ಅದರಿಂದ ಮನಸ್ಸಿಗೆ ಆಗುವ ನೋವು ಟ್ರೋಲ್‌ಗೆ ಒಳಗಾದ ವ್ಯಕ್ತಿಗೆ ಮಾತ್ರ ತಿಳಿಯುತ್ತದೆ. ಅತಿಯಾದ ಟ್ರೋಲ್ ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವಂತೆ ಮಾಡುತ್ತದೆ. ವೈಯಕ್ತಿಕ ಘನತೆ ಹಾಗೂ ಅವರು ಹೊಂದಿರುವ ಹುದ್ದೆಯ ಘನತೆಯನ್ನೂ ನಾವು ಕೇವಲವಾಗಿ ಮಾಡುವುದಿದೆ. ಇದು ನಿಜಕ್ಕೂ ಅಕ್ಷಮ್ಯʼ ಎಂದು ಪೃಥ್ವಿ ಶಾ ಟ್ರೋಲಿಗರಿಗೆ ಕಿವಿಮಾತು ಮತ್ತು ಎಚ್ಚರಿಕೆ ನೀಡಿದರು.
ನಾನು ನನ್ನ 25ನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ವಿಡಿಯೊ ಇತ್ತೀಚೆಗೆ ಟ್ರೋಲ್ ಗೆ ಒಳಗಾಗಿತ್ತು. ಟ್ರೋಲಿಗರು ನನ್ನ ಕ್ರಿಕೆಟ್ ಬದ್ಧತೆಯ ಕುರಿತು ಪ್ರಶ್ನಿಸಿದ್ದರು. ನಾನು ಅಭ್ಯಾಸವನ್ನು ನಿರ್ಲಕ್ಷಿಸುತ್ತಿದ್ದೇನೆ. ಇದೇ ಕಾರಣಕ್ಕೆ ಕ್ರಿಕೆಟ್‌ನಲ್ಲಿ ಅವಕಾಶ ಕಳೆದುಕೊಂಡೆ ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡಿದ್ದರು. ನಾನು ವರ್ಷದಲ್ಲಿ ಒಂದು ದಿನ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡುವುದು ಕೂಡ ತಪ್ಪಾ ಎಂಬ ಪ್ರಶ್ನೆ ನನ್ನಲ್ಲಿಯೇ ಕಾಡ ತೊಡಗಿದೆ ಎಂದರು.
ಟ್ರೋಲಿಗರಿಗಿಂತ ಹೆಚ್ಚಾಗಿ ಟ್ರೋಲ್‌ಗೆ ಒಳಗಾದವರು ಅನುಭವಿಸುವ ಕಿರಿ ಕಿರಿ ಅಸಹನೀಯ. ಟ್ರೋಲ್‌ಗೆ ಒಳಗಾದ ವರೂ ಒಂದು ಕುಟುಂಬದ ಸದಸ್ಯ ಎಂಬುದನ್ನು ಮರೆತು ನಮ್ಮ ಜನರು ವರ್ತಿಸುತ್ತಿರುವುದು ಆಕ್ಷೇಪಾರ್ಹ ಹಾಗೂ ಅಪಾಯಕಾರಿ ನಡೆಯಾಗಿದೆ ಎಂದರು.
75 ಲಕ್ಷ ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ್ದ ಪೃಥ್ವಿ ಶಾ ಹಲವು ಪಂದ್ಯಗಳಲ್ಲಿ ಶೂನ್ಯ ಸುತ್ತಿ ಕಳಪೆ ಪ್ರದರ್ಶನ ತೋರಿದ್ದರು. ಇದುವರೆಗೂ 79 ಐಪಿಎಲ್ ಪಂದ್ಯವನ್ನಾಡಿರುವ ಪೃಥ್ವಿ ಶಾ 1892 ರನ್ ಬಾರಿಸಿದ್ದಾರೆ. ಈ ವೇಳೆ 14 ಅರ್ಧಶತಕ ಗಳಿಸಿದ್ದಾರೆ.