ಬೆಂಗಳೂರು: ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು(PV Sindhu) ಅವರು ಕಳೆದ ಕೆಲ ವರ್ಷಗಳಿಂದ ಕಳಪೆ ಪ್ರದರ್ಶನ ತೋರುವ ಮೂಲಕ ಭಾರೀ ಟಿಕೆಗೆ ಗುರಿಯಾಗಿದ್ದರು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರಿ ಕ್ವಾರ್ಟರ್ಫೈನಲ್ ಹಂತದಲ್ಲೇ ಸೋತು ಸತತ 3ನೇ ಬಾರಿ ಒಲಿಂಪಿಕ್ಸ್ ಪದಕ ಜಯಿಸುವ ಅವಕಾಶದಿಂದ ವಂಚಿತರಾಗಿದ್ದರು. ಇದೀಗ ಮುಂಬರುವ ಟೂರ್ನಿಗೂ ಮುನ್ನವೇ ಸಿಂಧು ತಮ್ಮ ತರಬೇತುದಾರನನ್ನು ಬದಲಾಯಿಸಿಕೊಂಡಿದ್ದಾರೆ. ಮಾಜಿ ಬ್ಯಾಡ್ಮಿಂಟನ್ ಆಟಗಾರ, ಕನ್ನಡಿಗ ಅನೂಪ್ ಶ್ರೀಧರ್(Anup Sridhar) ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಸಿಂಧು ಅವರಿಗೆ ಮುಂದಿನ ಪ್ರಮುಖ ಟೂರ್ನಿಗಳಲ್ಲಿ ಅನೂಪ್ ಮಾರ್ಗದರ್ಶನ ನೀಡಲಿದ್ದಾರೆ.
2026ರ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆಲ್ಲುವುದು ಸಿಂಧು ಅವರ ಮುಂದಿನ ಪ್ರಮುಖ ಗುರಿಯಾಗಿದೆ. ಜತೆಗೆ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲೂ ಕಣಕ್ಕಿಳಿಯುವ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ಅಕ್ಟೋಬರ್ 8ರಿಂದ 13ರವರೆಗೆ ಫಿನ್ಲ್ಯಾಂಡ್ನಲ್ಲಿ ನಡೆಯಲಿರುವ ಆರ್ಕ್ಟಿಕ್ ಓಪನ್ನಲ್ಲಿ ಕಣಕ್ಕಿಳಿಯುವುದಾಗಿ ಸಿಂಧು ತಂದೆ ಪಿ.ವಿ. ರಮಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ ಭದ್ರತಾ ವ್ಯವಸ್ಥೆಗೆ ಐಸಿಸಿ ತೃಪ್ತಿ; ಪಾಕ್ ನೆಲದಲ್ಲೇ ಚಾಂಪಿಯನ್ಸ್ ಟ್ರೋಫಿ
ಕರ್ನಾಟಕದ ಮಾಜಿ ಶಟ್ಲರ್ ಹಾಗೂ ಒಲಿಂಪಿಯನ್ ಕೂಡ ಆಗಿರುವ 41 ವರ್ಷದ ಅನುಪ್ ಶ್ರೀಧರ್, ಬೆಂಗಳೂರಿನಲ್ಲಿ ಲಕ್ಷ್ಯ ಸೇನ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಇವರ ಮಾರ್ಗದರ್ಶನದಲ್ಲಿ ಲಕ್ಷ್ಯ ಸೇನ್ ಉತ್ತಮ ಪ್ರದರ್ಶನ ತೋರಿದ್ದರು. ಸದ್ಯ ಅನುಪ್ ಶ್ರೀಧರ್ ಆರ್ಕ್ಟಿಕ್ ಓಪನ್ ಮತ್ತು ಡೆನ್ಮಾರ್ಕ್ ಓಪನ್ಗೆ ತಾತ್ಕಾಲಿಕ ಕೋಚ್ ಆಗಿ ಸಿಂಧು ಜತೆ ತೆರಳಲಿದ್ದಾರೆ. ಖಾಯಂ ಕೋಚ್‌ಗಾಗಿ ಹುಡುಕಾಡುತ್ತಿದ್ದೇವೆ ಎಂದು ಸಿಂಧು ತಂದೆ ತಿಳಿಸಿದ್ದಾರೆ.
ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 2 ವರ್ಷಗಳಿಂದೀಚೆಗೆ ಆಡಿದ ಎಲ್ಲ ಟೂರ್ನಿಯಲ್ಲಿ ಹೀನಾಯ ಸೋಲು ಕಂಡಿದ್ದರು. 2ನೇ ಸುತ್ತು ಪ್ರವೇಶಿಸಲು ಕೂಡ ಕಷ್ಟ ಪಡುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಸೋಲಿನ ಬಳಿಕ ಸಿಂಧು ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಸ್ವತಃ ಸಿಂಧು ಸ್ಪಷ್ಟನೆ ನೀಡಿದ್ದರು. ‘ನನ್ನ ಭವಿಷ್ಯದ ಕುರಿತು ನಾನು ಸ್ಪಷ್ಟವಾಗಿದ್ದೇನೆ. ನಾನು ಸ್ವಲ್ಪ ವಿರಾಮ ಪಡೆದ ಮತ್ತೆ ಬ್ಯಾಡ್ಮಿಂಟನ್ನಲ್ಲಿ ಮುಂದುವರಿಯುತ್ತೇನೆ. ನನ್ನ ದೇಹ ಮತ್ತು ಮನಸ್ಸಿಗೆ ವಿರಾಮ ಬೇಕು. ಮುಂದಿನ ಪ್ರಯಾಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ನಾನು ಯೋಜನೆ ರೂಪಿಸಿದ್ದೇನೆ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸುದ್ದಿಯನ್ನು ತಳ್ಳಿ ಹಾಕಿದ್ದರು. ಒಲಿಂಪಿಕ್ಸ್ ಬಳಿಕ ವಿಶ್ರಾಂತಿ ಪಡೆದಿದ್ದ ಸಿಂಧು ಮುಂಬರುವ ಟೂರ್ನಿಗಳಿಗಾಗಿ ಹೈದರಾಬಾದ್ನ ಗಚ್ಚಿಬೌಳಿ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.