Monday, 25th November 2024

PV Sindhu: ಬ್ಯಾಡ್ಮಿಂಟನ್ ಅಕಾಡೆಮಿಗೆ ಪಿ.ವಿ. ಸಿಂಧು ಭೂಮಿ ಪೂಜೆ

ವಿಶಾಖಪಟ್ಟಣಂ: ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಅವರು ಅಂತಾರಾಷ್ಟ್ರೀಯ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿಯ ಭೂಮಿಪೂಜೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ(Vishakhapatnam) ಜಿಲ್ಲೆಯ ಅರಿಲೋವದಲ್ಲಿ ಈ ಅಕಾಡೆಮಿ(PV Sindhu Badminton Academy) ನಿರ್ಮಾಣವಾಗಲಿದೆ. ಈ ಮೂಲಕ ಊರಿನ ಯುವ ಬ್ಯಾಡ್ಮಿಂಟನ್‌ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಒದಗಿಸುವುವ ಉದ್ದೇಶ ಪಿ.ವಿ. ಸಿಂಧು ಅವರದ್ದಾಗಿದೆ.

ಸಿಂಧು ಅವರ ಅಕಾಡೆಮಿಗಾಗಿ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರಕಾರವು ಮೂರು ಎಕರೆ ಜಮೀನು ಮಂಜೂರು ಮಾಡಿತ್ತು. ಅಕಾಡೆಮಿಯಲ್ಲಿ ಒಂಭತ್ತು ಸಿಂಥೆಟಿಕ್ ಬ್ಯಾಡ್ಮಿಂಟನ್ ಕೋರ್ಟ್‌ಗಳು, ವ್ಯಾಯಾಮ ಶಾಲೆ ಮತ್ತು 70 ಮಂದಿ ತಂಗುವ ವ್ಯವಸ್ಥೆ ಇದೆ.

ಭೂಮಿ ಪೂಜೆ ನೆರವೇರಿಸಿದ ಫೋಟೊವನ್ನು ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿಂಧು, ‘ನನ್ನ ಅಕಾಡೆಮಿಗೆ ವಿಶಾಖಪಟ್ಟಣಕ್ಕಿಂತ ಉತ್ತಮವಾಗಿರುವ ಸ್ಥಳ ಇನ್ನೊಂದಿಲ್ಲ. ಎಲ್ಲಾ ನೈಜ ಪ್ರತಿಭೆಗಳ ಅಗತ್ಯಗಳನ್ನು ಪೂರೈಸುವ ಅಕಾಡೆಮಿಯೊಂದನ್ನು ನಡೆಸುವುದು ನನ್ನ ಕನಸಾಗಿತ್ತು. ಇದನ್ನೀಗ ಸಾಕಾರಗೊಳಿಸಲಿದ್ದೇನೆʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ PV Sindhu: ಸಿಂಧುಗೆ ಕನ್ನಡಿಗ ಅನುಪ್​ ಶ್ರೀಧರ್​ ನೂತನ ಕೋಚ್

‘ಭಾರತೀಯ ಬ್ಯಾಡ್ಮಿಂಟನ್‌ ಕ್ರೀಡೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ಈ ಅಕಾಡೆಮಿ ಮೂಲ ಉದ್ದೇಶ. ಬ್ಯಾಡ್ಮಿಂಟನ್ ಜತೆಗೆ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ತರಬೇತಿ ನೀಡುವ ಯೋಜನೆಯೂ ಇದೆ ಎಂದು ಸಿಂಧು ಅವರ ತಂದೆ ಹಾಗೂ ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ಪಿ.ವಿ. ರಮಣ ಹೇಳಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ ಸೋಲಿನ ಬಳಿಕ ಸಿಂಧು ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಸ್ವತಃ ಸಿಂಧು ಸ್ಪಷ್ಟನೆ ನೀಡಿದ್ದರು. ‘ನನ್ನ ಭವಿಷ್ಯದ ಕುರಿತು ನಾನು ಸ್ಪಷ್ಟವಾಗಿದ್ದೇನೆ. ನಾನು ಸ್ವಲ್ಪ ವಿರಾಮ ಪಡೆದ ಮತ್ತೆ ಬ್ಯಾಡ್ಮಿಂಟನ್​ನಲ್ಲಿ ಮುಂದುವರಿಯುತ್ತೇನೆ. ನನ್ನ ದೇಹ ಮತ್ತು ಮನಸ್ಸಿಗೆ ವಿರಾಮ ಬೇಕು. ಮುಂದಿನ ಪ್ರಯಾಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ನಾನು ಯೋಜನೆ ರೂಪಿಸಿದ್ದೇನೆ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸುದ್ದಿಯನ್ನು ತಳ್ಳಿ ಹಾಕಿದ್ದರು.

ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 2 ವರ್ಷಗಳಿಂದೀಚೆಗೆ ಆಡಿದ ಎಲ್ಲ ಟೂರ್ನಿಯಲ್ಲಿ ಹೀನಾಯ ಸೋಲು ಕಂಡಿದ್ದರು. 2ನೇ ಸುತ್ತು ಪ್ರವೇಶಿಸಲು ಕೂಡ ಕಷ್ಟ ಪಡುತ್ತಿದ್ದಾರೆ.