Saturday, 21st December 2024

R Ashwin: ʻಕೇವಲ 5 ನಿಮಿಷ ಮೊದಲು ಗೊತ್ತಾಗಿತ್ತುʼ-ಅಶ್ವಿನ ನಿವೃತ್ತಿ ಬಗ್ಗೆ ಜಡೇಜಾ ಪ್ರತಿಕ್ರಿಯೆ!

R Ashwin: ʻI got to know R Ashwin was retiring 5 minutes before he announced itʼ,says Ravindra Jadeja

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಹಠಾತ್‌ ವಿದಾಯ ಘೋಷಿಸಿದ್ದ ಮಾಜಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (R Ashwin) ಅವರ ನಿರ್ಧಾರದ ಬಗ್ಗೆ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಅವರು ನಿವೃತ್ತಿ ಹೇಳುವುದಕ್ಕೂ 5 ನಿಮಿಷಗಳ ಮುನ್ನ ನನಗೆ ಈ ಮಾಹಿತಿ ತಿಳಿದಿತ್ತು ಎಂದು ಜಡೇಜಾ ತಿಳಿಸಿದ್ದಾರೆ.

ಉಭಯ ತಂಡಗಳ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ನಿಮಿತ್ತ ಭಾರತ ತಂಡ ಮೆಲ್ಬರ್ನ್‌ ಕ್ರಿಕೆಟ್‌ ಗೌಂಡ್‌ನಲ್ಲಿ ಕಠಿಣ ತಾಲೀಮು ನಡೆಸುತ್ತಿದೆ. ಈ ವೇಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರವೀಂದ್ರ ಜಡೇಜಾಗೆ ಅಶ್ವಿನ್‌ ಅವರ ನಿವೃತ್ತಿ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಜಡೇಜಾ ಸವ್ವಿವರವಾಗಿ ತಿಳಿಸಿದ್ದಾರೆ.

ನನಗೆ ಕೊನೆಯ ಕ್ಷಣದಲ್ಲಿ ಮಾಹಿತಿ ತಿಳಿದಿತ್ತು: ಜಡೇಜಾ

“ಆರ್‌ ಅಶ್ವಿನ್‌ ಅವರ ನಿವೃತ್ತಿ ಬಗ್ಗೆ ನನಗೆ ಕೊನೆಯ ಕ್ಷಣದಲ್ಲಿ ತಿಳಿದಿತ್ತು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸುವುದಕ್ಕೂ ಮುನ್ನ ನನಗೆ ಗೊತ್ತಾಗಿತ್ತು. ಸುದ್ದಿಗೋಷ್ಠಿ ಆರಂಭಕ್ಕೂ 5 ನಿಮಿಷ ಮುನ್ನ ಕೆಲ ಸಂಗತಿಗಳು ನಡೆಯಲಿದೆ ಎಂದು ಆಟಗಾರರು ಮಾತನಾಡಿಕೊಂಡಿದ್ದರು. ಈ ವೇಳೆ ನನಗೆ ಶಾಕ್‌ ಆಯಿತು. ಏಕೆಂದರೆ ನಾವಿಬ್ಬರೂ ಆ ದಿನ ಪೂರ್ತಿ ಜತೆಯಲ್ಲಿ ಕೂತಿದ್ದೆವು. ಅವರು ನನಗೆ ಯಾವುದೇ ಸುಳಿವು ನೀಡಿರಲಿಲ್ಲ. ಈ ವಿಷಯ ನನಗೆ ಕೊನೆಯ ಕ್ಷಣದಲ್ಲಿ ತಿಳಿದಿತ್ತು. ಅಶ್ವಿನ್‌ ಮನಸು ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದೆ,” ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.

ಮೂರನೇ ಟೆಸ್ಟ್‌ ಬಳಿಕ ವಿದಾಯ ಹೇಳಿದ್ದ ಅಶ್ವಿನ್‌

ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂನಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಈ ಪಂದ್ಯದ ಮುಗಿದ ಬೆನ್ನಲ್ಲೆ ಆರ್‌ ಅಶ್ವಿನ್‌ ಅವರು ಸುದ್ದಿಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಶ್ವಿನ್‌ ನಿವೃತ್ತಿ ಘೋಷಿಸುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಕೊನೆಯ ಕ್ಷಣದಲ್ಲಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದರು ಹಾಗೂ ಸಹ ಆಟಗಾರರು ಹಾಗೂ ಕ್ರಿಕೆಟ್‌ ಅಭಿಮಾನಿಗಳಿಗೆ ಅಚ್ಚರಿ ಉಂಟಾಗಿತ್ತು.

ಭಾರತ ತಂಡದಲ್ಲಿ ಅಶ್ವಿನ್‌ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ

“ಭಾರತ ತಂಡದಲ್ಲಿ ಆರ್‌ ಅಶ್ವಿನ್‌ ಅವರ ಸ್ಥಾನವನ್ನು ಯಾರಾದರೂ ತುಂಬಬಹುದೆಂದು ಪ್ರತಿಯೊಬ್ಬರೂ ಮಾತನಾಡಿಕೊಳ್ಳಬಹುದು. ಆದರೆ, ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಇದೀಗ ಯುವ ಆಟಗಾರರಿಗೆ ಅತ್ಯುತ್ತಮ ಅವಕಾಶ ಲಭಿಸಲಿದೆ ಹಾಗೂ ಅವರು ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ತೋರುವ ಮೂಲಕ ಹಿರಿಯ ಸ್ಪಿನ್ನರ್‌ನ ಸ್ಥಾನವನ್ನು ತುಂಬಬಹುದಾಗಿದೆ,” ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin Retirement: ʻಅಶ್ವಿನ್‌ರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲʼ-ಬದ್ರಿನಾಥ್‌ ಗಂಭೀರ ಆರೋಪ!