Thursday, 19th December 2024

R Ashwin Retirement: ʻಅಶ್ವಿನ್‌ರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲʼ-ಬದ್ರಿನಾಥ್‌ ಗಂಭೀರ ಆರೋಪ!

'He was not treated fairly, his sudden retirement a shock',says S Badrinath

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (R Ashwin Retirement) ಅವರನ್ನು ಭಾರತ ತಂಡದಲ್ಲಿ ನ್ಯಾಯಯುತವಾಗಿ ನಡೆಸಿಕೊಂಡಿಲ್ಲ ಎಂದು ತಮಿಳುನಾಡು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಸುಬ್ರಮಣ್ಯಂ ಬದ್ರಿನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಡ್ರಾದಲ್ಲಿ ಅಂತ್ಯವಾದ ಬಳಿಕ ನಾಯಕ ರೋಹಿತ್‌ ಶರ್ಮಾ ಜೊತೆ ಸುದ್ದಿಗೋಷ್ಠಿಗೆ ಬಂದಿದ್ದ ರವಿಚಂದ್ರನ್‌ ಅಶ್ವಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ಆ ಮೂಲಕ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ಪೂರ್ಣ ವಿರಾಮ ಇಟ್ಟರು. ಆ ಮೂಲಕ ಟೀಮ್‌ ಇಂಡಿಯಾದ ಸಹ ಆಟಗಾರರು, ಮಾಜಿ ಆಟಗಾರರು ಸೇರಿದಂತೆ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದರು.

ಆದರೆ, ಪ್ರಸ್ತುತ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಅರ್ಧದಲ್ಲಿಯೇ ಆರ್‌ ಅಶ್ವಿನ್‌ ಅವರು ಈ ಶಾಕಿಂಗ್‌ ನಿರ್ಧಾರ ತೆಗೆದುಕೊಂಡಿದ್ದು ಅನುಮಾನವನ್ನು ಮೂಡಿಸಿದೆ. ಹಲವು ಮಾಜಿ ಆಟಗಾರರು ಕೂಡ ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿವೆ. ಅದರಂತೆ ತಮಿಳುನಾಡು ಮಾಜಿ ಬ್ಯಾಟ್ಸ್‌ಮನ್‌ ಎಸ್‌ ಬದ್ರಿನಾಥ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಕಳೆದ ಹಲವು ವರ್ಷಗಳಿಂದ ಟೀಮ್‌ ಇಂಡಿಯಾ ನಡೆಸಿಕೊಂಡಿರುವ ಹಾದಿಯಿಂದ ಬೇಸತ್ತು ನಿವೃತ್ತಿ ಪಡೆದಿರುವ ತಮ್ಮ ಮಾಜಿ ಸಹ ಆಟಗಾರನನ್ನು ಬದ್ರಿನಾಥ್‌ ಬೆಂಬಲಿಸಿದ್ದಾರೆ.

IPL 2025: ‘ನನಗೆ ಯಾವುದೇ ವಿಷಾದವಿಲ್ಲ’:-ಸಿಎಸ್‌ಕೆ ಪರ ಆಡಲು ಎದುರು ನೋಡುತ್ತಿದ್ದೇನೆಂದ ಆರ್‌ ಅಶ್ವಿನ್‌!

ಆರ್‌ ಅಶ್ವಿನ್‌ರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ

“ನನಗೆ ಶಾಕ್‌ ಆಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಆರ್‌ ಅಶ್ವಿನ್‌ ಅವರನ್ನು ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಪರ್ತ್‌ ಟೆಸ್ಟ್‌ ಬಳಿಕ ಅವರು ತಂಡದಿಂದ ಹೊರ ಬರಬೇಕೆಂದು ಬಯಸಿದ್ದರು ಎಂದು ರೋಹಿತ್‌ ಶರ್ಮಾ ಹೇಳಿಕೊಂಡಿದ್ದರು. ತಮ್ಮ ಬದಲು ವಾಷಿಂಗ್ಟನ್‌ ಸುಂದರ್‌ ಆಡಿದಾಗಲೇ ಅಶ್ವಿನ್‌ ನಿವೃತ್ತಿ ನೀಡಲು ಬಯಸಿದ್ದರು. ಇವರು ಖುಷಿಯಾಗಿಲ್ಲವೆಂದು ಇದು ಸಂಗತಿ ತಿಳಿಸುತ್ತದೆ,” ಎಂದು ಸ್ಟಾರ್‌ ಸ್ಪೋರ್ಟ್ಸ್‌ ತಮಿಳಿಗೆ ಎಸ್‌ ಬದ್ರಿನಾಥ್‌ ತಿಳಿಸಿದ್ದಾರೆ.

“ಪ್ರಾಮಾಣಿಕವಾಗಿ ತಮಿಳುನಾಡು ಕ್ರಿಕೆಟಿಗನ ಪಾಲಿಗೆ ಇದು ದೊಡ್ಡ ಸಂಗತಿಯಾಗಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಬೇರೆ ರಾಜ್ಯಗಳ ಆಟಗಾರರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಈ ಎಲ್ಲಾ ಹಿನ್ನಡೆಗಳ ಹೊರತಾಗಿಯೂ ಆರ್‌ ಅಶ್ವಿನ್‌ ಅವರು 500ಕ್ಕೂ ಹೆಚ್ಚಿನ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ದಂತಕತೆಯಾಗಿದ್ದಾರೆ,” ಎಂದು ಮಾಜಿ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

“ಅವರು ಏನನ್ನು ಅನುಭವಿಸಿರಬಹುದೆಂದು ಊಹಿಸಿ. ಅವರು ಕೆಲವು ವಿಷಯಗಳನ್ನು ಎದುರಿಸಿದ್ದಾರೆಂದು ನನಗೆ ತಿಳಿದಿದೆ. ಅನೇಕ ಸಂದರ್ಭಗಳಲ್ಲಿ, ಅವರನ್ನು ಬದಿಗೊತ್ತುವ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಪ್ರತಿ ಬಾರಿಯೂ ಅವರು ಫೀನಿಕ್ಸ್ ಹಕ್ಕಿಯಂತೆ ಬಹು ಎತ್ತರಕ್ಕೆ ಏರಿದ್ದಾರೆ,” ಬದ್ರಿನಾಥ್‌ ಶ್ಲಾಘಿಸಿದ್ದಾರೆ.

ಅದ್ಬುತ ನಿರ್ಗಮನಕ್ಕೆ ಅಶ್ವಿನ್‌ ಅರ್ಹರು

“ಅವರು ಕ್ರಿಕೆಟ್‌ನಿಂದ ದೂರ ಉಳಿಯಲಿ, ಆದರೆ ಈ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರ ಬಂದಿದ್ದು ನಿಜಕ್ಕೂ ಬೇಸರದ ಸಂಗತಿ. ಅವರು ಅದ್ಭುತವಾಗಿ ವಿದಾಯ ಹೇಳಬೇಕಾಗಿತ್ತು ಹಾಗೂ ಅವರು ಅದ್ಭುತ ವಿದಾಯಕ್ಕೆ ಅರ್ಹರು. ಇದು ನ್ಯಾಯಯುತವಾಗಿಲ್ಲ, ಇದು ಸರಿಯಾದ ಹಾದಿಯಲ್ಲ,” ಎಂದು ಬದ್ರಿನಾಥ್‌ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಓದಿ: R Ashwin: ಅಶ್ವಿನ್​ ದಿಢೀರ್​ ವಿದಾಯ ನಿರ್ಧಾರಕ್ಕೆ ಕಾರಣವೇನು?