ಚೆನ್ನೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಹಿರಿಯ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆರ್.ಅಶ್ವಿನ್(R Ashwin) ಅವರು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರ ಪತ್ನಿ ರಿತಿಕಾ ಎಂದು ತಪ್ಪಾಗಿ ಬೇರೊಬ್ಬ ರಿತಿಕಾಗೆ ಸಂದೇಶ ಕಳುಹಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಸದ್ಯ ಅಶ್ವಿನ್ ಅವರ ಸಂದೇಶದ ಫೋಟೊಗಳು ವೈರಲ್ ಆಗಿದೆ.
ಅಶ್ವಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಕ್ರಿಕೆಟ್ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ರಿತಿಕಾ ಎನ್ನುವ ಹೆಸರಿನ ಟ್ವಿಟರ್ ಎಕ್ಸ್ ಖಾತೆದಾರರೊಬ್ಬರು ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿ ಸೋತ ಬಳಿಕ ‘ಆಸ್ಟ್ರೇಲಿಯಾದವರು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಬಹುದು ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ನಗುವಿನ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದರು.
ಇದನ್ನೂ ಓದಿ Jasprit Bumrah: ಇಂಗ್ಲೆಂಡ್ ವಿರುದ್ಧದ ಸರಣಿ; ಬುಮ್ರಾಗೆ ವಿಶ್ರಾಂತಿ?
ರಿತಿಕಾ ಅವರ ಈ ಪೋಸ್ಟ್ ಕಂಡ ಅಶ್ವಿನ್ ಅವರು ಇದು ರೋಹಿತ್ ಶರ್ಮ ಅವರ ಪತ್ನಿ ಟ್ವೀಟ್ ಮಾಡಿದ್ದೆಂದು ತಿಳಿದು ‘ಹಾಯ್ ರಿತಿಕಾ, ಹೇಗಿದ್ದೀರಿ? ಚಿಕ್ಕ ಮಗುವಿಗೆ ಮತ್ತು ಕುಟುಂಬಕ್ಕೆ ನಮಸ್ಕಾರಗಳು’ ಎಂದು ಕೇಳಿದ್ದಾರೆ ಇದಕ್ಕೆ ಉತ್ತರಿಸಿದ ರಿತಿಕಾ,’ನಾನು ಚೆನ್ನಾಗಿದ್ದೇನೆ ಅಶ್ವಿನ್ ಅಣ್ಣ’ ಎಂದು ಉತ್ತಿರಿಸಿದ್ದಾರೆ. ಈ ವೇಳೆ ಅಶ್ವಿನ್‌ಗೆ ತಾವು ತಪ್ಪಾದ ರಿತಿಕಾಗೆ ಸಂದೇಶ ಕಳುಹಿಸಿದ್ದು ಎಂದು ತಿಳಿದಿದೆ. ತಕ್ಷಣ ಅಶ್ವಿನ್ ತಾವು ಮಾಡಿದ್ದ ಟ್ವೀಟ್ ಡಿಲೀಡ್ ಮಾಡಿದ್ದಾರೆ. ಆದರೆ ಅಶ್ವಿನ್ ಈ ಟ್ವೀಟ್ ಡಿಲೀಡ್ ಮಾಡುವ ಮುನ್ನವೇ ಕೆಲ ನೆಟ್ಟಿಗರು ಇದರ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಅಶ್ವಿನ್ ಕುಟುಂಬ ರೋಹಿತ್ ಕುಟುಂಬದ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಗಾಗ ಕೆಲ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಅಶ್ವಿನ್ ಕನ್ ಫ್ಯೂಸ್ ಆಗಲೂ ಒಂದು ಕಾರಣವಿದೆ. ರಿತಿಕಾ ಎನ್ನುವ ಬಳಕೆದಾರೆ ರೋಹಿತ್ ಅವರ ಪತ್ನಿ ರಿತಿಕಾರದ್ದೇ ಫೋಟೊವನ್ನು ಪ್ರೊಫೈಲ್ ಫೋಟೋ ಆಗಿ ಬಳಕಿಸಿಕೊಂಡಿದ್ದರು. ಹೀಗಾಗಿ ಅಶ್ವಿನ್ ಅರಿವಿಗೆ ಬರಲಿಲ್ಲ.