ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಪಡೆದಿದ್ದ ರವಿಚಂದ್ರನ್ ಅಶ್ವಿನ್ (R Ashwin’s Retirement) ನಿರ್ಧಾರದ ಬಗ್ಗೆ ಸ್ಪಿನ್ ದಿಗ್ಗಜನ ತಂದೆ ರವಿಚಂದ್ರನ್ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಮಗನ ನಿವೃತ್ತಿಯ ಬಗ್ಗೆ ನಮಗೂ ಕೂಡ ಕೊನೆಯ ಹಂತದಲ್ಲಿ ತಿಳಿದಿತ್ತು, ಆದರೆ ಅವರು ರಾಷ್ಟ್ರೀಯ ತಂಡದ ಆಡುವುದನ್ನು ಮುಂದುವರಿಸಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬುಧವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆರ್ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಆ ಮೂಲಕ ಸಹ ಆಟಗಾರರು ಹಾಗೂ ಮಾಜಿ ಆಟಗಾರರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳಿಗೆ ಹಿರಿಯ ಸ್ಪಿನ್ನರ್ ಶಾಕ್ ನೀಡಿದ್ದರು.
ಅಂದ ಹಾಗೆ ಯಾವ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್ ಅಶ್ವಿನ್ ವಿದಾಯ ಹೇಳಿದ್ದಾರೆಂದು ತಿಳಿದುಬಂದಿಲ್ಲ. ಆದರೆ, ಅವರು ಸುದ್ದಿಗೋಷ್ಠಿಯಲ್ಲಿ ಯಾರನ್ನೂ ಕೂಡ ದೂರಲಿಲ್ಲ. ಆದರೆ, ವಿದೇಶಿ ಟೆಸ್ಟ್ ಸರಣಿಗಳಲ್ಲಿ ತಮಗೆ ನಿಯಮಿತವಾಗಿ ಅವಕಾಶ ಸಿಗದೆ ಇರುವ ಬಗ್ಗೆ ಆರ್ ಅಶ್ವಿನ್ ಅಸಮಾಧಾನವನ್ನು ಹೊಂದಿರಬಹುದೆಂದು ಹೇಳಲಾಗುತ್ತಿದೆ. ಅಶ್ವಿನ್ ಗುರುವಾರ ಮುಂಜಾನೆ ಚೆನ್ನೈನಲ್ಲಿ ಕಾಣಿಸಿಕೊಂಡರು.
ತಮ್ಮ ಪುತ್ರನ ಅಂತಾರಾಷ್ಟ್ರೀಯ ಕ್ರಿಕೆಟ್ ನಿವತ್ತಿ ಬಗ್ಗೆ ನ್ಯೂಸ್ 18 ಜೊತೆ ಪ್ರತಿಕ್ರಿಯಿಸಿದ ಅಶ್ವಿನ್ ತಂದೆ ರವಿಚಂದ್ರನ್, “ನನಗೂ ಕೂಡ ಕೊನೆಯ ನಿಮಿಷದಲ್ಲಿ ನಿವೃತ್ತಿ ಬಗ್ಗೆ ತಿಳಿದಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪಡೆಯುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ ಹಾಗೂ ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ಹಲವು ಕಾರಣಗಳಿಂದ ನಿವೃತ್ತಿ ನೀಡಿರಬಹುದು. ಬಹುಶಃ ಇದಕ್ಕೆ ಕಾರಣ ಅಶ್ವಿನ್‌ಗೆ ಮಾತ್ರ ಗೊತ್ತಿರಬಹುದು,” ಎಂದು ತಿಳಿಸಿದ್ದಾರೆ.
ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕುಟುಂಬದ ಪ್ರತಿಕ್ರಿಯೆ ಹೇಗೆತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ತಮ್ಮ ಪುತ್ರ ವಿದಾಯ ಹೇಳಿದ ಕುಟುಂಬದ ಸದಸ್ಯರು ಭಾವುಕರಾಗಿದ್ದರು. ಏಕೆಂದರೆ 14-15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಬಳಿಕ ಹಠಾತ್ ನಿವೃತ್ತಿ ಘೋಷಿಸಿದ್ದರಿಂದ ಎಲ್ಲರಿಗೂ ಶಾಕ್ ಆಗಿತ್ತು,” ಎಂದು ರವಿಚಂದ್ರನ್ ಹೇಳಿದ್ದಾರೆ.
“ಇದೇ ಸಮಯದಲ್ಲಿ ತಮ್ಮ ಪುತ್ರನ ನಿವೃತ್ತಿಯ ನಿರ್ಧಾರದಿಂದ ಕೆಲ ಅನುಮಾನಗಳು ಇರುವುದನ್ನು ನಿರೀಕ್ಷಿಸುತ್ತಿದ್ದೇನೆ. ಇನ್ನು ಎಷ್ಟು ದಿನಗಳ ಕಾಲ ಅವರು ಇದನ್ನು ಸಹಿಸಿಕೊಂಡು ಬರಬೇಕು? ಈ ಹಿನ್ನೆಲೆಯಲ್ಲಿ ಅವರೇ ನಿವೃತ್ತಿಯ ಬಗ್ಗೆ ತೀರ್ಮಾನಿಸಬೇಕಾಗಿದೆ,” ಎಂದುಆರ್ ಅಶ್ವಿನ್ ತಂದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
“ಅವರ ಮನಸಿನಲ್ಲಿ ಯಾವ ಸಂಗತಿಗಳು ಓಡುತ್ತಿವೆ ಎಂಬುದು ನನಗೆ ಗೊತ್ತಿಲ್ಲ. ಅವರು ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ತುಂಬು ಸಂತೋಷದಿಂದ ನಾನು ಕೂಡ ಇದನ್ನು ಸ್ವೀಕರಿಸುತ್ತೇನೆ. ತನ್ನ ಮಗನ ನಿವೃತ್ತಿಯ ಬಗ್ಗೆ ನನಗೆ ಯಾವುದೇ ರೋತಿಯ ಭಾವನೆಗಳು ಇಲ್ಲ. ಅವರು ನಿವೃತ್ತಿ ನೀಡಿದ ಹಾದಿಯ ಬಗ್ಗೆ ನನಗೆ ಸಂತೋಷವಿದೆ ಹಾಗೂ ಅವರು ಇನ್ನಷ್ಟು ದಿನಗಳ ಕಾಲ ರಾಷ್ಟ್ರೀಯ ತಂಡದ ಪರ ಮುಂದುವರಿಯಬೇಕಿತ್ತು ಎಂಬ ಬಗ್ಗೆ ಬೇಸರವಿದೆ,” ಎಂದು ರವಿಚಂದ್ರನ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: R Ashwin Retirement: ʻಟೆಸ್ಟ್ ಸರಣಿಯ ಬಳಿಕ ನೀಡಬಹುದಿತ್ತುʼ-ಅಶ್ವಿನ್ ನಿರ್ಧಾರವನ್ನು ಟೀಕಿಸಿದ ಸುನೀಲ್ ಗವಾಸ್ಕರ್!