Friday, 13th December 2024

Rahul Dravid: ರಾಜಸ್ಥಾನ್‌ ರಾಯಲ್ಸ್‌ಗೆ ರಾಹುಲ್‌ ದ್ರಾವಿಡ್‌ ಮುಖ್ಯ ಕೋಚ್‌

Rahul Dravid

ಬೆಂಗಳೂರು: ನಿರೀಕ್ಷೆಯಂತೆ ಭಾರತ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid) ಐಪಿಎಲ್‌ನ(IPL) ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡಕ್ಕೆ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದಿನ 18ನೇ ಆವೃತ್ತಿಯಲ್ಲಿ ರಾಜಸ್ಥಾನ್‌ ತಂಡ ದ್ರಾವಿಡ್‌ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಟೀಮ್‌ ಇಂಡಿಯಾ ಕೋಚ್‌ ಹುದ್ದೆಯಿಂದ ಕೆಳಗಿಳಿದ ವೇಳೆಯೇ ದ್ರಾವಿಡ್‌ ರಾಜಸ್ಥಾನ್‌ ಕೋಚ್‌ ಆಗಲಿದ್ದಾರೆ ಎನ್ನಲಾಗಿತ್ತು. ಅದರಂತೆ ದ್ರಾವಿಡ್‌ ಮತ್ತೆ ತಮ್ಮ ಮಾಜಿ ತಂಡದ ಪರ ಕೋಚಿಂಗ್‌ ನಡೆಸಲಿದ್ದಾರೆ.

ಈ ಹಿಂದೆ ದ್ರಾವಿಡ್​ ರಾಜಸ್ಥಾನ್ ರಾಯಲ್ಸ್​(Rajasthan Royals) ತಂಡದ ಪರ 2 ಆವೃತ್ತಿಯಲ್ಲಿ ಕೋಚಿಂಗ್​ ನಡೆಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್​ ಕೋಚಿಂಗ್​ನಿಂದ ದೂರ ಉಳಿದಿದ್ದರು. ರಾಜಸ್ಥಾನ್‌ ತಂಡದ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್​ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್​ನಲ್ಲಿ ಇವರ ನಾಯಕತ್ವದಲ್ಲಿ ತಂಡ ಫೈನಲ್​ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಇದುವರೆಗೆ ತಂಡದ ಕೋಚ್‌ ಆಗಿದ್ದ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಇನ್ನು ಮುಂದೆ ತಂಡದ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಕೋಚ್‌ ಆಗುವ ಮುನ್ನವೂ ಅವರು 2021ರಲ್ಲಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ Paris Paralympics: ಬೆಳ್ಳಿ ಗೆದ್ದ ಸಚಿನ್ ಖಿಲಾರಿ; 21ಕ್ಕೇರಿದ ಭಾರತದ ಪದಕ ಬೇಟೆ

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಇದು ನನಸಾದದ್ದು ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್‌ ಗೆಲುವಿನ ಮೂಲಕ. ಹೌದು, ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ದ್ರಾವಿಡ್‌ ಗಳಿಸಿಕೊಂಡಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.

https://x.com/thecricketgully/status/1831259665801543696

ದ್ರಾವಿಡ್‌ ಐಪಿಎಲ್‌ ಸಾಧನೆ

ರಾಹುಲ್‌ ದ್ರಾವಿಡ್‌ ಅವರ ಐಪಿಎಲ್‌ ಜರ್ನಿ ಆರಂಭವಾದದ್ದು 2008 ಉದ್ಘಾಟನ ಆವೃತ್ತಿಯ ಐಪಿಎಲ್‌ ಮೂಲಕ. ತವರು ತಂಡವಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ. ಒಟ್ಟಾರೆಯಾಗಿ ಅವರು 89 ಐಪಿಎಲ್‌ ಪಂದ್ಯವನ್ನಾಡಿ 2174 ರನ್‌ ಬಾರಿಸಿದ್ದಾರೆ. 75 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 11 ಅರ್ಧಶತಕ ಬಾರಿಸಿದ್ದಾರೆ. ಕೊನೆಯ ಬಾರಿಗೆ ದ್ರಾವಿಡ್‌ ಐಪಿಎಲ್‌ ಆಡಿದ್ದು 2013ರಲ್ಲಿ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದಿದ್ದ ಮುಂಬೈ ವಿರುದ್ಧದ ಪಂದ್ಯ ಇದಾಗಿತ್ತು. ಆ ಪಂದ್ಯದಲ್ಲಿ ಅವರು 43 ರನ್‌ ಬಾರಿಸಿದ್ದರು. ಭಾರತ ಪರ 164 ಟೆಸ್ಟ್‌ ಪಂದ್ಯಗಳನ್ನಾಡಿ 13288 ರನ್‌, ಏಕದಿನದಲ್ಲಿ 344 ಪಂದ್ಯವಾಡಿ 10889 ರನ್‌ ಬಾರಿಸಿದ್ದಾರೆ.