Tuesday, 26th November 2024

Rani Rampal: ರಾಣಿ ರಾಂಪಾಲ್‌ ಸಾಧನೆ ಕೊಂಡಾಡಿದ ಮೋದಿ

ನವದೆಹಲಿ: ಅಕ್ಟೋಬರ್‌ 24ರಂದು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದ ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ಗೆ(Rani Rampal) ಪ್ರಧಾನಿ ನರೇಂದ್ರ ಮೋದಿ(PM Modi) ಶುಭ ಹಾರೈಸಿದ್ದಾರೆ. ಜತೆಗೆ ರಾಂಪಾಲ್‌ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. 29 ವರ್ಷ ವಯಸ್ಸಿನ ರಾಣಿ ಅವರು 16 ವರ್ಷಗಳ ಹಾಕಿ ವೃತ್ತಿಜೀವನಕ್ಕೆ ಗುರುವಾರ ವಿದಾಯ ಹೇಳಿದ್ದರು.

‘ಭಾರತ ಮಹಿಳಾ ಹಾಕಿಯಲ್ಲಿ ನಿಮ್ಮ ಜರ್ಸಿ ಸಂಖ್ಯೆ ’28’ ಸಾಟಿಯಿಲ್ಲದ ಕೌಶಲ ಮತ್ತು ತಡೆಯಲಾಗದ ಗೋಲುಗಳಿಗೆ ಸಮನಾಗಿದೆ. ದೇಶದ ದಿಗ್ಗಜ ಆಟಗಾರರ ಸಾಲಿನಲ್ಲಿ ನೀವು ಸ್ಥಾನ ಪಡೆದಿದ್ದೀರಿ’ ಎಂದು ಮೋದಿ ಟ್ವೀಟ್‌ ಮೂಲಕ ಹೊಗಳಿದ್ದಾರೆ. ಮೋದಿ ಹಾರೈಕೆಗೆ ರಾಣಿ ರಾಂಪಾಲ್‌ ಧನ್ಯವಾದ ತಿಳಿಸಿದ್ದಾರೆ. ನಿವೃತ್ತಿ ಹೊಂದಿದ ಅವರನ್ನು ಇದೀಗ ಸಬ್‌ ಜೂನಿಯರ್‌ ಮಹಿಳಾ ತಂಡದ ರಾಷ್ಟ್ರೀಯ ಕೋಚ್‌ ಆಗಿ ನೇಮಕ ಮಾಡಲಾಗಿದೆ.

ರಾಂಪಾಲ್‌ ಅವರು ಭಾರತ ಹಾಕಿ ಕಂಡ ಅತ್ಯಂತ ಯಶಸ್ವಿ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. 2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆದಿರುವುದು ಅವರ ನಾಯಕತ್ವದಲ್ಲಿ ಭಾರತೀಯ ತಂಡದ ಉತ್ಕೃಷ್ಟ ನಿರ್ವಹಣೆಯಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಅವರು 2020ರಲ್ಲಿ ಮೇಜರ್‌ ಧ್ಯಾನ್‌ಚಂದರ್‌ ಖೇಲ್‌ ರತ್ನ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ Rani Rampal: ರಾಜೇಂದ್ರ ಭಟ್‌ ಅಂಕಣ: ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿದ್ದವು!

ಹರಿಯಾಣದ ಸಣ್ಣ ಪಟ್ಟಣದಲ್ಲಿ ಕಡು ಬಡತನದ ಕುಟುಂಬದಿಂದ ಬಂದ ರಾಂಪಾಲ್‌ ಹಾಕಿ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುತ್ತ ರಾಷ್ಟ್ರೀಯ ತಂಡಕ್ಕೆ ನೇಮಕಗೊಂಡಿದ್ದರು. ಅವರ ತಂದೆ ಎತ್ತಿನ ಗಾಡಿ ಎಳೆಯುವ ವೃತ್ತಿ ಮಾಡುತ್ತಿದ್ದರು. ಹದಿನಾಲ್ಕರ ಹರೆಯದ ವೇಳೆ ಒಲಿಂಪಿಕ್‌ ಅರ್ಹತಾ ಕೂಟವೊಂದರಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದ ರಾಂಪಾಲ್‌ ಅವರು ಭಾರತ ಪರ 254 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಫಾರ್ವರ್ಡ್‌ ಆಟಗಾರ್ತಿ ಆಗಿದ್ದ ಅವರು 205 ಗೋಲು ಹೊಡೆದ ಸಾಧನೆ ಮಾಡಿದ್ದಾರೆ.