ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇ ಜಯದೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಡೆಲ್ಲಿ ಮೂರನೇ ಸೋಲಿಗೆ ಶರಣಾಗಿದೆ.
ಚೇಸಿಂಗ್ ವೇಳೆ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ (16) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 50 ರನ್ ಪೇರಿಸಿದರು.
ಮಾರ್ಶ್ ಜೊತೆ ಸೇರಿದ ವಾರ್ನರ್, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಐಪಿಎಲ್‌ನಲ್ಲಿ ದಾಖಲೆಯ 52ನೇ ಅರ್ಧಶತಕ ಗಳಿಸಿದರು.
ಈ ನಡುವೆ ವಾರ್ನರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ವನಿಂದು ಹಸರಂಗ ಪಂದ್ಯಕ್ಕೆ ಮಹತ್ವದ ತಿರುವನ್ನು ನೀಡಿದರು.
ನಾಯಕ ರಿಷಭ್ ಪಂತ್ 17 ಎಸೆತಗಳಲ್ಲಿ 34 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಅಬ್ಬರಿಸಿದರೂ ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಹೊರದಬ್ಬಿದರು. ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್ ಮೂರು ಹಾಗೂ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಗಳಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಬಿರುಸಿನ ಆಟವಾಡಿದ ಮ್ಯಾಕ್ಸ್‌ವೆಲ್ ಕೇವಲ 30 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದರು. 34 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು.
ಶಹಬಾಜ್ ಅಹ್ಮದ್ ಜೊತೆ ಸೇರಿದ ದಿನೇಶ್ ಕಾರ್ತಿಕ್ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಈ ಪೈಕಿ ಮುಸ್ತಾಫಿಜುರ್ ರೆಹಮಾನ್ ಅವರ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸೇರಿದಂತೆ 28 ರನ್ ಸೊರೆಗೈದರು.