Saturday, 23rd November 2024

ಅರಬ್ಬರ ನಾಡಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ, ಮ್ಯಾಕ್ಸ್ ಪಂದ್ಯಶ್ರೇಷ್ಠ, ಹರ್ಷಲ್ ಹ್ಯಾಟ್ರಿಕ್

ದುಬಾೖ: ಹರ್ಷಲ್‌ ಪಟೇಲ್‌ ಹ್ಯಾಟ್ರಿಕ್‌ ಸಾಹಸ ಹಾಗೂ ವಿರಾಟ್‌ ಕೊಹ್ಲಿ -ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿಯ ಬಿರುಸಿನ ಬ್ಯಾಟಿಂಗ್‌ ನೆರವಿ ನಿಂದ ಭಾನುವಾರ ರಾತ್ರಿಯ ಐಪಿಎಲ್‌ ಪಂದ್ಯವನ್ನು ಆರ್‌ಸಿಬಿ 54 ರನ್ನುಗಳಿಂದ ಜಯಿಸಿದೆ. ಇದರೊಂದಿಗೆ ಯುಎಇಯಲ್ಲೂ ಗೆಲುವಿನ ಖಾತೆ ತೆರೆಯಿತು.

ಆರ್‌ಸಿಬಿ 6 ವಿಕೆಟಿಗೆ 165 ರನ್‌ ಬಾರಿಸಿ ಸವಾಲೊಡ್ಡಿದರೆ, ಮುಂಬೈ 18.1 ಓವರ್‌ಗಳಲ್ಲಿ 111ಕ್ಕೆ ಆಲೌಟ್‌ ಆಯಿತು. ಆರ್‌ಸಿಬಿ ಮುಂಬೈಯನ್ನು ಆಲೌಟ್‌ ಮಾಡಿದ ಮೊದಲ ನಿದರ್ಶನ ಇದಾಗಿದೆ.

17ನೇ ಓವರ್‌ ದಾಳಿಗಿಳಿದ ಹರ್ಷಲ್‌ ಪಟೇಲ್‌, ಮೊದಲ 3 ಎಸೆತಗಳಲ್ಲಿ ಹಾರ್ದಿಕ್‌ ಪಾಂಡ್ಯ, ಕೈರನ್‌ ಪೊಲಾರ್ಡ್‌ ಮತ್ತು ರಾಹುಲ್‌ ಚಹರ್‌ ವಿಕೆಟ್‌ ಉಡಾಯಿಸಿ, ಹ್ಯಾಟ್ರಿಕ್‌ ಪೂರೈಸಿದರು. ಪಟೇಲ್‌ ಸಾಧನೆ 17ಕ್ಕೆ 4 ವಿಕೆಟ್‌. ಇದು ಆರ್‌ಸಿಬಿ ಪರ ದಾಖಲಾದ 3ನೇ ಹ್ಯಾಟ್ರಿಕ್‌. 2010ರಲ್ಲಿ ಪ್ರವೀಣ್‌ ಕುಮಾರ್‌ ರಾಜಸ್ಥಾನ್‌ ವಿರುದ್ಧ , 2017ರಲ್ಲಿ ಸಾಮ್ಯುಯೆಲ್‌ ಬದ್ರಿ ಮುಂಬೈ ವಿರುದ್ಧವೇ (ಬೆಂಗಳೂರು) ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಚಹಲ್‌ 4 ಓವರ್‌ಗಳಲ್ಲಿ ಕೇವಲ 11 ರನ್ನಿತ್ತು 3 ವಿಕೆಟ್‌ ಉರುಳಿಸಿದರು.

ಕೊಹ್ಲಿ ಸತತ 2ನೇ ಅರ್ಧ ಶತಕದೊಂದಿಗೆ ಮಿಂಚಿದರು. 42 ಎಸೆತ ನಿಭಾಯಿಸಿದ ಆರ್‌ಸಿಬಿ ಕಪ್ತಾನ 3 ಸಿಕ್ಸರ್‌, 3 ಬೌಂಡರಿ ನೆರವಿ ನಿಂದ 51 ರನ್‌ ಹೊಡೆದರು. ಮ್ಯಾಕ್ಸ್‌ವೆಲ್‌ ಗಳಿಕೆ 37 ಎಸೆತಗಳಿಂದ ಸರ್ವಾಧಿಕ 56 ರನ್‌ (6 ಬೌಂಡರಿ, 3 ಸಿಕ್ಸರ್‌). ಇದು ಪ್ರಸಕ್ತ ಋತುವಿನ ಮೂರನೇ ಅರ್ಧಶತಕ.

ದ್ವಿತೀಯ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ, ಪಡಿಕ್ಕಲ್‌ಗೆ (0) ಪೆವಿಲಿಯನ್‌ ಹಾದಿ ತೋರಿಸಿದರೂ ಕೊಹ್ಲಿ ಅಬ್ಬರಿಸಿದರು. ಶ್ರೀಕರ್‌ ಭರತ್‌ ಉತ್ತಮ ಬೆಂಬಲ ನೀಡಿದರು. ಇದರಲ್ಲಿ ಭರತ್‌ ಕೊಡುಗೆ 32 ರನ್‌. 24 ಎಸೆತಗಳ ಈ ಸೊಗಸಾದ ಆಟದ ವೇಳೆ 2 ಸಿಕ್ಸರ್‌, 2 ಬೌಂಡರಿ ಸಿಡಿಯಿತು.

3ನೇ ಕ್ರಮಾಂಕದಲ್ಲಿ ಕ್ರೀಸ್‌ ಇಳಿದ ಮ್ಯಾಕ್ಸ್‌ವೆಲ್‌ ಕೂಡ ಬಿರುಸಿನ ಆಟಕ್ಕಿಳಿದರು. ಬೌಂಡರಿ, ಸಿಕ್ಸರ್‌ ಸರಾಗ ವಾಗಿ ಬರತೊಡಗಿತು. ಕೊಹ್ಲಿ-ಮ್ಯಾಕ್ಸ್‌ವೆಲ್‌ ಭರ್ತಿ 7 ಓವರ್‌ ನಿಭಾಯಿಸಿದರು. 3ನೇ ವಿಕೆಟಿಗೆ 51 ರನ್‌ ಒಟ್ಟುಗೂಡಿತು. ಮ್ಯಾಕ್ಸ್‌ವೆಲ್‌ ರಿವರ್ಸ್‌ ಸ್ವೀಪ್‌ ಮೂಲಕ ಮುಂಬೈ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು. ಅವರ ಸಿಕ್ಸರ್‌ಗಳೆಲ್ಲವೂ ರಿವರ್ಸ್‌ ಸ್ವೀಪ್‌ ಮೂಲಕವೇ ಬಂತು.

ಜಸ್‌ಪ್ರೀತ್‌ ಬುಮ್ರಾ ಸತತ ಎಸೆತಗಳಲ್ಲಿ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಮತ್ತು ಎಬಿಡಿ ವಿಕೆಟ್‌ ಕಿತ್ತು ಮುಂಬೈಗೆ ಮೇಲುಗೈ ಒದಗಿಸಿದರು.

ಕೊಹ್ಲಿ 10 ಸಾವಿರ ರನ್‌ ಸರದಾರ: ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ನೂತನ ಎತ್ತರ ತಲುಪಿದರು. ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ ಹಿರಿಮೆಗೆ ಪಾತ್ರರಾದರು. ಇಂಡಿಯನ್‌ ಟೀಮ್‌-ಮೇಟ್‌ ಬುಮ್ರಾ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಕೊಹ್ಲಿ 10 ಸಾವಿರ ರನ್‌ ಗಡಿ ತಲುಪಿದರು. ಈ ಪಂದ್ಯ ಆಡಲಿಳಿಯುವಾಗ ಕೊಹ್ಲಿ ಮೈಲುಗಲ್ಲಿಗೆ ಕೇವಲ 13 ರನ್‌ ಅಗತ್ಯವಿತ್ತು. ಇದು ಅವರ 314ನೇ ಪಂದ್ಯ. ಭಾನುವಾರ ಪಂದ್ಯಕ್ಕೂ ಮುನ್ನ 298 ಟಿ20 ಇನ್ನಿಂಗ್ಸ್‌ಗಳಲ್ಲಿ ಆಡಲಿಳಿದಿರುವ ಕೊಹ್ಲಿ, 41.61ರ ಸರಾಸರಿಯಲ್ಲಿ ರನ್‌ ಪೇರಿಸಿದ್ದಾರೆ. 5 ಶತಕ, 73 ಅರ್ಧ ಶತಕಗಳು ಇದರಲ್ಲಿ ಸೇರಿವೆ. 113 ರನ್‌ ಸರ್ವಾಧಿಕ ಗಳಿಕೆ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ಒಟ್ಟು(6 ವಿಕೆಟಿಗೆ) 165

ಮುಂಬೈ ಇಂಡಿಯನ್ಸ್‌
ಒಟ್ಟು(18. ಓವರ್‌ಗಳಲ್ಲಿ ಆಲೌಟ್‌) 111