ಅಬುಧಾಬಿ: ಶುಕ್ರವಾರ ನಡೆದ ಎಲಿಮಿನೇಟರ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗುವ ಮೂಲಕ ಲೀಗ್‌ನಿಂದ ಹೊರಬಿದ್ದಿತು.
ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (56 ರನ್, 43 ಎಸೆತ, 5 ಬೌಂಡರಿ) ಏಕಾಂಗಿ ನಿರ್ವಹಣೆ ನಡುವೆಯೂ ವೇಗಿ ಜೇಸನ್ ಹೋಲ್ಡರ್ (25ಕ್ಕೆ 3) ಮಾರಕ ದಾಳಿ ನಲಗಿ 7 ವಿಕೆಟ್‌ಗೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆರ್‌ಸಿಬಿ ಬೌಲರ್‌ಗಳ ಪ್ರಬಲ ನಿರ್ವಹಣೆ ನಡುವೆಯೂ ಸನ್‌ರೈಸರ್ಸ್, ಕೇನ್ ವಿಲಿಯಮ್ಸನ್ (50*ರನ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 132 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್ ಮೊದಲ ಓವರ್‌ನಲ್ಲೇ ಶ್ರೀವತ್ಸ ಗೋಸ್ವಾಮಿ (0) ವಿಕೆಟ್ ಕಳೆದುಕೊಂಡಿತು. ಬಳಿಕ ಡೇವಿಡ್ ವಾರ್ನರ್ (17) ಹಾಗೂ ಕನ್ನಡಿಗ ಮನೀಷ್ ಪಾಂಡೆ (24ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ ಕೆಲಕಾಲ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಈ ಜೋಡಿ 2ನೇ ವಿಕೆಟ್‌ಗೆ 41 ರನ್ ಜತೆಯಾಟವಾಡಿದ್ದ ವೇಳೆ ವೇಗಿ ಮೊಹಮದ್ ಸಿರಾಜ್ ಆಘಾತ ನೀಡಿದರು. ಬಳಿಕ ಬಂದ ಪ್ರಿಯಂ ಗಾರ್ಗ್ (9), ಬಂದಷ್ಟೇ ವೇಗವಾಗಿ ವಾಪಸಾದರು. ಸನ್‌ರೈಸರ್ಸ್ 67 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ವೇಳೆ ಜತೆಯಾದ ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ಹೋಲ್ಡರ್ (20*ರನ್, 19 ಎಸೆತ, 2 ಬೌಂಡರಿ) ಜೋಡಿ ಮುರಿಯದ 5ನೇ ವಿಕೆಟ್‌ಗೆ 65 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು.
ಪ್ಲೇಆಫ್ ಹಂತದಲ್ಲೇ ಆರಂಭಿಕರನ್ನು ಕಳೆದುಕೊಂಡು ತತ್ತರಿಸಿದ್ದ ಆರ್‌ಸಿಬಿಗೆ ಆರನ್ ಫಿಂಚ್ (32 ರನ್, 30 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಎಬಿ ಡಿವಿಲಿಯರ್ಸ್ ಜೋಡಿ ಕೆಲಕಾಲ ಚೇತರಿಕೆ ನೀಡಲು ಯತ್ನಿಸಿತು. ಹೋಲ್ಡರ್ ದಾಳಿಯಿಂದ ತತ್ತರಿಸಿದ್ದ ಆರ್‌ಸಿಬಿ ಇನಿಂಗ್ಸ್‌ಗೆ ಈ ಜೋಡಿ ಮರುಜೀವ ತುಂಬಿತು. ಆದರೆ, ಉತ್ತಮ ಲಯ ಕಂಡುಕೊಳ್ಳುವ ಯತ್ನದಲ್ಲಿದ್ದ ವೇಳೆ ಶಾಬಾದ್ ನದೀಂ ಬ್ರೇಕ್ ಹಾಕಿದರು. ಅನಾವಶ್ಯಕ ಹೊಡೆತಕ್ಕೆ ಮುಂದಾದ ಆರನ್ ಫಿಂಚ್, ಅಬ್ದುಲ್ ಸಮದ್‌ಗೆ ಕ್ಯಾಚ್ ನೀಡಿದರು.
ಬಳಿಕ ಬಂದ ಮೊಯಿನ್ ಅಲಿ, ಫ್ರೀಹಿಟ್‌ನಲ್ಲಿ ಸಿಂಗಲ್ಸ್ ಕದಿಯಲು ಯತ್ನಿಸಿ ರನೌಟ್ ಬಲೆಗೆ ಬಿದ್ದರು. ಇತರ ಬ್ಯಾಟ್ಸ್‌ಮನ್ ಗಳಿಂದ ಅಗತ್ಯ ಸಾಥ್ ಗಿಟ್ಟಿಸಿಕೊಳ್ಳಲು ವಿಫಲರಾದ ಎಬಿಡಿ ಏಕಾಂಗಿ ನಿರ್ವಹಣೆ ಮುಂದುವರಿಸಿದರು. ಶಿವಂ ದುಬೆ (8), ವಾಷಿಂಗ್ಟನ್ ಸುಂದರ್ (5) ನಿರಾಸೆ ಕಂಡರೆ, ಅರ್ಧಶತಕ ಪೂರೈಸಿದ ಬೆನ್ನಲ್ಲೇ ಎಬಿಡಿ ಕೂಡ ನಟರಾಜನ್‌ರ ಯಾರ್ಕರ್ ಎಸೆತಕ್ಕೆ ಬೌಲ್ಡ್ ಆದರು. ಇದರೊಂದಿಗೆ ಕನಿಷ್ಠ ಸ್ಪರ್ಧಾತ್ಮಕ ಮೊತ್ತ ಪೇರಿಸುವ ಆರ್‌ಸಿಬಿ ಆಸೆಗೆ ಸನ್‌ರೈಸರ್ಸ್ ಲಗಾಮು ಹಾಕಿತು.