Thursday, 12th December 2024

‘ಹಾಲಿ ಚಾಂಪಿಯನ್’ ಮುಂಬೈ ಇಂಡಿಯನ್ಸ್’ಗೆ ಆರ್‌.ಸಿ.ಬಿ ಸವಾಲು

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ‘ಹಾಲಿ ಚಾಂಪಿಯನ್’ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.

ಟೂರ್ನಿಯ ಮೊದಲ ಸುತ್ತಿನಲ್ಲಿ ಬೆಂಗಳೂರು ತಂಡವು ಸೂಪರ್ ಓವರ್‌ನಲ್ಲಿ ಮುಂಬೈ ಎದುರು ಗೆದ್ದಿತ್ತು. ನಂತರದ ಪಂದ್ಯಗಳಲ್ಲಿಯೂ ಕೊಹ್ಲಿ ಬಳಗವು ತನ್ನ ಶಕ್ತಿವರ್ಧನೆ ಮಾಡಿಕೊಳ್ಳುತ್ತ ಬಂದಿದೆ. ನಾಯಕ ರೋಹಿತ್ ಶರ್ಮಾ ಗಾಯಗೊಂಡಿ ರುವುದು ತಂಡದಲ್ಲಿ ತುಸು ಚಿಂತೆ ಮೂಡಿಸಿದೆ. ಆದರೆ ಶರ್ಮಾ ಅನುಪಸ್ಥಿತಿಯಲ್ಲಿ ಪೊಲಾರ್ಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್, ಪೊಲಾರ್ಡ್ ಮತ್ತು ಪಾಂಡ್ಯ ಸಹೋದರರು ತಂಡದ ಬ್ಯಾಟಿಂಗ್‌ಗೆ ಆಸರೆಯಾಗಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಪ್ಯಾಟಿನ್ಸನ್ ಮತ್ತು ರಾಹುಲ್ ಚಾಹರ್ ಮೇಲುಗೈ ಸಾಧಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಎದುರು ಮುಂಬೈ ಸೋತಿತ್ತು. ಆದ್ದರಿಂದ ಗೆಲುವಿನ ಹಳಿಗೆ ಮರಳುವ ಮತ್ತು ಆರ್‌ಸಿಬಿ ಎದುರು ಮುಯ್ಯಿ ತೀರಿಸಿಕೊಳ್ಳುವತ್ತ ಮುಂಬೈ ಚಿತ್ತ ಇದೆ. ಈ ಪಂದ್ಯದಲ್ಲಿಯೂ ರೋಹಿತ್ ಕಣಕ್ಕಿಳಿಯುವುದು ಅನುಮಾನ.

ವಿರಾಟ್ ಕೊಹ್ಲಿ ಬಳಗವು ಕೂಡ ತನ್ನ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲನುಭವಿಸಿತ್ತು. ಆ ಪಂದ್ಯ ದಲ್ಲಿ ಆರಂಭಿಕ ಜೋಡಿ ಆಯರನ್ ಫಿಂಚ್ ಮತ್ತು ದೇವದತ್ತ ಪಡಿಕ್ಕಲ್ ಅವರು ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾಗಿರ ಲಿಲ್ಲ. ಆದರೆ, ಕೊಹ್ಲಿ ಅರ್ಧಶತಕ ಮತ್ತು ಎಬಿ ಡಿವಿಲಿಯರ್ಸ್ ಬ್ಯಾಟಿಂಗ್‌ನಿಂದಾಗಿ ತಂಡವು ಗೌರವಯುತ ಮೊತ್ತ ಗಳಿಸಿತ್ತು. ಆದರೆ ಮಧ್ಯಮ ಕ್ರಮಾಂಕ ವೈಫಲ್ಯದಿಂದಾಗಿ ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ರನ್‌ ಗಳಿಕೆಯಾಗಿರಲಿಲ್ಲ.