Wednesday, 20th November 2024

RCB Trials: ಹರಾಜಿಗೂ ಮುನ್ನ ಆರ್‌ಸಿಬಿ ಟ್ರಯಲ್ಸ್‌ನಲ್ಲಿ ಕಾಣಿಸಿಕೊಂಡ ಹಾರ್ಡ್ ಹಿಟ್ಟರ್ ಬ್ಯಾಟರ್ಸ್‌

ಬೆಂಗಳೂರು: ಇದೇ ಶನಿವಾರ ಮತ್ತು ಭಾನುವಾರ ನಡೆಯುವ ಐಪಿಎಲ್‌ ಆಟಗಾರರ ಮೆಗಾ ಹರಾಜಿಗೂ(IPL Auction 2025) ಮುನ್ನ ಆರ್‌ಸಿಬಿ ತಂಡ ಆಟಗಾರರ ಆಯ್ಕೆಗೆ ಟ್ರಯಲ್ಸ್‌(RCB Trials) ನಡೆಸಿದೆ. ಅಚ್ಚರಿ ಎಂಬಂತೆ ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಪಂಜಾಬ್‌ ತಂಡದ ಅಶುತೋಷ್ ಶರ್ಮಾ(Ashutosh Sharma) ಮತ್ತು ಕೆಕೆಆರ್‌ ತಂಡದ ಅಂಗ್‌ಕ್ರಿಶ್‌ ರಘುವಂಶಿ(Angkrish Raghuvanshi) ಕಾಣಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಆರ್‌ಸಿಬಿ ಹರಾಜಿನಲ್ಲಿ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.

19 ವರ್ಷದ ಯುವ ಬ್ಯಾಟರ್ ಅಂಗ್‌ಕ್ರಿಶ್‌ ರಘುವಂಶಿ ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ತಂಡದ ಪರ 10 ಪಂದ್ಯಗಳನ್ನಾಡಿ 163 ರನ್‌ ಕಲೆ ಹಾಕಿದ್ದರು. ಒಂದು ಅರ್ಧಶತಕ ಕೂಡ ಬಾರಿಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್‌ ತಂಡವನ್ನು ಗೆಲುವಿನ ಹಳಿ ಏರಿಸಿದ್ದೇ ಅಶುತೋಷ್ ಶರ್ಮಾ. ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಹೋರಾಡುವ 26 ವರ್ಷದ ಅಶುತೋಷ್ ತಮ್ಮ ಆಜಾನುಬಾಹು ತೋಳ್ಬಲದಿಂದ ಸಿಕ್ಸರ್‌ ಬಾರಿಸುವಲ್ಲಿ ನಿಸ್ಸೀಮ. ಇದೀಗ ಆರ್‌ಸಿಬಿ ಹರಾಜಿನಲ್ಲಿ ಇವರಿಗೆ ಬಲೆ ಬೀಸಿದಂತಿದೆ. ಇದುವರೆಗೆ ಐಪಿಎಲ್‌ ಸೇರಿದಂತೆ ಒಟ್ಟು 26 ಟಿ20 ಪಂದ್ಯಗಳನ್ನಾಡಿರುವ ಅಶುತೋಷ್ ಶರ್ಮಾ 608 ರನ್‌ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಒಳಗೊಂಡಿದೆ.

ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ ಉಭಯ ಆಟಗಾರರು ಬ್ಯಾಟಿಂಗ್‌ ನಡೆಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಮ್ಯಾಚ್‌ ಫಿನಿಶರ್‌ ಆಗಿದ್ದ ದಿನೇಶ್‌ ಕಾರ್ತಿಕ್‌ ನಿವೃತ್ತಿಯಾದ ಕಾರಣ ಈ ಸ್ಥಾನ ತುಂಬ ಬಲ್ಲ ಆಟಗಾರನ ಅಗತ್ಯವಿದೆ. ಇದೇ ಕಾರಣಕ್ಕೆ ಅಶುತೋಷ್ ಅವರನ್ನು ಆರ್‌ಸಿಬಿ ಟ್ರಯಲ್ಸ್‌ಗೆ ಕರೆದಂತಿದೆ.

ಆರ್‌ಸಿಬಿ ಮೂರು ಮಂದಿಯನ್ನಷ್ಟೇ ತಂಡದಲ್ಲಿ ಉಳಿಸಿಕೊಂಡಿದೆ. ನ.24 ಮತ್ತು 25 ರಂದು ನಡೆಯುವ ಹರಾಜಿನಲ್ಲಿ ಯಾರನೆಲ್ಲ ಖರೀದಿಸಲಿದೆ ಎಂದು ಕಾದು ನೋಡಬೇಕಿದೆ. ಮೂಲಗಳ ಪ್ರಕಾರ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರನ್ನು ಆರ್‌ಸಿಬಿ ದೊಡ್ಡ ಮೊತ್ತವನ್ನಾದರೂ ನೀಡಿ ಖರೀದಿ ಮಾಡಲಿದೆ ಎಂದು ತಿಳಿದುಬಂದಿದೆ. ರಾಹುಲ್‌ ಜತೆಗೆ ಯಜುವೇಂದ್ರ ಚಹಲ್‌ ಅವರನ್ನು ಕೂಡ ಮತ್ತೆ ತಂಡ ಸೇರಿಸಲು ಫ್ರಾಂಚೈಸಿ ಆಲೋಚಿಸಿದೆ ಎನ್ನಲಾಗಿದೆ. ಆರ್‌ಸಿಬಿ ಬಳಿ 83 ಕೋಟಿ ರೂ. ಉಳಿಕೆ ಹಣವಿದೆ. ವಿರಾಟ್‌ ಕೊಹ್ಲಿ(21 ಕೋಟಿ ರೂ.), ರಜತ್‌ ಪಟೇದರ್(11‌ ಕೋಟಿ ರೂ.), ಯಶ್‌ ದಯಾಳ್ (5ಕೋಟಿ ರೂ) ಅವರನ್ನು ತಂಡ ರಿಟೈನ್‌ ಮಾಡಿಕೊಂಡ ಆಟಗಾರರು. 

ಇದನ್ನೂ ಓದಿ IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮುನಾಫ್‌ ಪಟೇಲ್‌ ಬೌಲಿಂಗ್‌ ಕೋಚ್‌!

ಆರ್‌ಸಿಬಿ ಕೈ ಬಿಟ್ಟ ಆಟಗಾರರು

ಫಾಫ್ ಡು ಪ್ಲೆಸ್ಸಿಸ್, ಮೊಹಮ್ಮದ್‌ ಸಿರಾಜ್‌, ಕ್ಯಾಮರೂನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿಲ್‌ ಜ್ಯಾಕ್ಸ್‌, ಅಲ್ಜಾರಿ ಜೋಸೆಫ್, ಟಾಮ್ ಕರನ್‌, ಲಾಕಿ ಫರ್ಗುಸನ್, ರೀಸ್ ಟೋಪ್ಲಿ, ಅನುಜ್ ರಾವತ್, ಸೌರವ್ ಚೌಹಾಣ್, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮಯಾಂಕ್ ದಾಗರ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ವಿಜಯ್ ಕುಮಾರ್ ವೈಶಾಕ್ ಅವರನ್ನು ಪ್ರಮುಖವಾಗಿ ಕೈಬಿಡಲಾಗಿದೆ.