ಮುಂಬೈ: ಗುರುವಾರ ರಾತ್ರಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಮಹಿಳಾ ಟಿ20 ಪಂದ್ಯದಲ್ಲಿ ಭಾರತ 60 ರನ್‌ಗಳ ಗೆಲುವು ಸಾಧಿಸುವ ಮೂಲಕ ಸರಣಿ ಜಯ ಸಾಧಿಸಿತ್ತು. ಇದೇ ಇದೇ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಯುವ ಆಟಗಾರ್ತಿ ರಿಚಾ ಘೋಷ್(Richa Ghosh) ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ರಿಚಾ ಅವರು ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸುವ ಮೂಲಕ ಈ ಸಾಧನೆಗೈದ ಭಾರತ ಮೊದಲ ಮತ್ತು ಒಟ್ಟಾರೆಯಾಗಿ ವಿಶ್ವದ ಮೂರನೇ ಆಟಗಾರ್ತಿ ಎನಿಸಿಕೊಂಡರು. ರಿಚಾಗೂ ಮುನ್ನ ನ್ಯೂಜಿಲ್ಯಾಂಡ್‌ನ ನಾಯಕಿ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ಫೋಬೆ ಲಿಚ್‌ಫೀಲ್ಡ್ ಕೂಡ ತಲಾ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದೀಗ ರಿಚಾ ಕೂಡ 18 ಎಸೆತಗಳಿಂದ ಅರ್ಧಶತಕ ಬಾರಿಸಿ ಜಂಟಿ ದಾಖಲೆ ನಿರ್ಮಿಸಿದರು. ಒಟ್ಟು 21 ಎಸೆತ ಎದುರಿಸಿದ ರಿಚಾ ಘೋಷ್ 5 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 54 ರನ್ ಬಾರಿಸಿದರು.
ಇದನ್ನೂ ಓದಿ INDW vs WIW: ಮೂರನೇ ಪಂದ್ಯ ಗೆದ್ದು ಮಹಿಳಾ ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!
ವಿಂಡೀಸ್ ವಿರುದ್ಧ ಸರಣಿ ಗೆಲ್ಲುವ ಮೂಲಕ ಭಾರತ ತಂಡ ತವರಿನಲ್ಲಿ ಐದು ವರ್ಷಗಳ ಬಳಿಕ ಟಿ20 ಸರಣಿ ಗೆದ್ದ ಸಾಧನೆ ಮಾಡಿತು. ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 218 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡ ಕೂಡ ಕಠಿಣ ಹೋರಾಟ ನಡೆಸಿತ್ತು. ಆದರೆ, ರಾಧ ಯಾದವ್ ಸೇರಿದಂತೆ ಭಾರತದ ಬೌಲಿಂಗ್ ದಾಳಿಗೆ ನಲುಗಿದ ವಿಂಡೀಸ್, 20 ಓವರ್‌ಗಳನ್ನು ಮುಗಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಂಡಿದ್ದ ವಿಂಡೀಸ್, ಮೂರನೇ ಪಂದ್ಯ ಗೆದ್ದು ಟಿ20ಐ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಬಯಸಿತ್ತು. ಆದರೆ, ಭಾರತ ತಂಡ ಇದಕ್ಕೆ ಅವಕಾಶ ನೀಡಲಿಲ್ಲ. ಬ್ಯಾಟಿಂಗ್‌ನಲ್ಲಿ ದಾಖಲೆಯ ಮೊತ್ತವನ್ನು ಕಲೆ ಹಾಕಿದ್ದ ಭಾರತ, ಚೇಸಿಂಗ್‌ನಲ್ಲಿ ಪ್ರವಾಸಿ ತಂಡವನ್ನು ದೊಡ್ಡ ಮೊತ್ತವನ್ನು ಕಲೆ ಹಾಕಲು ಬಿಡಲಿಲ್ಲ.
ವಿಂಡೀಸ್ ಪರ ಚಿನೆಲ್ ಹೆನ್ರಿ 43 ರನ್‌ಗಳಿಸಿದ್ದು, ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವೈಯಕ್ತಿಕ 30ರ ಗಡಿ ದಾಟುವಲ್ಲಿ ಎಡವಿದರು. ಆದರೆ, ಹೇಲಿ ಮ್ಯಾಥ್ಯೂಸ್ (22), ದೇವೇಂದ್ರ ಡಾಟಿನ್ (25) ಹಾಗೂ ಶೆಮೆನ್ ಕ್ಯಾಂಪ್‌ಬೆಲ್ (17) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆದರೆ, ಭಾರತದ ಸ್ಪಿನ್ ಮೋಡಿ ಮಾಡಿದ ರಾಧಾ ಯಾದವ್ ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ 29 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ವಿಂಡೀಸ್ ತಂಡವನ್ನು 150ರ ಆಸುಪಾಸಿನಲ್ಲಿ ಕಟ್ಟಿ ಹಾಕಲು ಭಾರತಕ್ಕೆ ನೆರವು ನೀಡಿದರು.