ನವದೆಹಲಿ: ಡಿಸೆಂಬರ್ 21ರಿಂದ ಆರಂಭವಾಗಲಿರುವ ವಿಜಯ್ ಹಝಾರೆ ಟ್ರೋಫಿ (Vijay Hazare Trophy) ಟೂರ್ನಿಗೆ ಉತ್ತರ ಪ್ರದೇಶ ತಂಡದ ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ಸ್ಟಾರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ನೇಮಕಗೊಂಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡದ ನಾಯಕರಾಗಿದ್ದ ಭುವನೇಶ್ವರ್ ಕುಮಾರ್ ಸ್ಥಾನವನ್ನು ರಿಂಕು ಸಿಂಗ್ ತುಂಬಿದ್ದಾರೆ. ದೇಶಿ ಕ್ರಿಕೆಟ್‌ನ ಹಿರಿಯರ ತಂಡಕ್ಕೆ ನಾಯಕತ್ವ ವಹಿಸುತ್ತಿರುವುದು ಇದೇ ಮೊದಲು.
ಉತ್ತರ ಪ್ರದೇಶ ತಂಡಕ್ಕೆ ನಾಯಕನಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಿಂಕು ಸಿಂಗ್, “ಯುಪಿ ಟಿ-20 ಲೀಗ್‌ನಲ್ಲಿ ನಾಯಕತ್ವ ವಹಿಸಲು ಇದು ನನಗೆ ದೊಡ್ಡ ಅವಕಾಶವಾಗಿತ್ತು. ಇದರಿಂದ ನಾನು ಬಹಳಷ್ಟು ಕಲಿಯಬೇಕಿದೆ. ನಾನು ಯುಪಿ ಟಿ-20 ಲೀಗ್‌ನಲ್ಲೂ ಬೌಲಿಂಗ್ (ಆಫ್ ಸ್ಪಿನ್) ಪ್ರಯತ್ನಿಸಿದ್ದೆ. ಇಂದಿನ ಕ್ರಿಕೆಟ್‌ಗೆ ಸಂಪೂರ್ಣ ಆಟಗಾರನ ಅಗತ್ಯವಿರುತ್ತದೆ – ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರನ್ನೂ ಮಾಡಬಲ್ಲ ಕ್ರಿಕೆಟಿಗ. ಈಗ ಬೌಲಿಂಗ್‌ನತ್ತಲೂ ಗಮನ ಹರಿಸುತ್ತಿದ್ದೇನೆ. ಉತ್ತರ ಪ್ರದೇಶದ ನಾಯಕನಾಗಿ ನನ್ನ ಜವಾಬ್ದಾರಿ ಹೆಚ್ಚಿದ್ದು, ಅದಕ್ಕೆ ಸಂಪೂರ್ಣ ಸಿದ್ಧನಾಗಿದ್ದೇನೆ,” ಎಂದು ಹೇಳಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ನಾಯಕನ ಹುಟುಕಾಟದಲ್ಲಿದೆ. ಇದೇ ಸಮಯದಲ್ಲಿಉತ್ತರ ಪ್ರದೇಶ ತಂಡವನ್ನು ಮುನ್ನಡೆಸಲು ರಿಂಕು ಸಿಂಗ್‌ಗೆ ಅವಕಾಶ ನೀಡಿರುವುದು ಎಡಗೈ ಬ್ಯಾಟ್ಸ್‌ಮನ್ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ.
“ಪ್ರಸ್ತುತ ಉತ್ತರ ಪ್ರದೇಶ ತಂಡ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಂತೆ ಮಾಡುವುದರತ್ತ ಗಮನ ಹರಿಸುತ್ತೇನೆ. ಮುಂಬರುವ ಐಪಿಎಲ್ ಋತುವಿನಲ್ಲಿ ಕೆಕೆಆರ್ ನಾಯಕತ್ವದ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ. 2015-16ರಲ್ಲಿ ನಾವು ಮೊದಲ ಬಾರಿ ಗೆದ್ದ ಟ್ರೋಫಿಯನ್ನು ಉತ್ತರ ಪ್ರದೇಶ ತಂಡ ಮತ್ತೆ ಗೆಲ್ಲಲು ನಾನು ನನ್ನ ಯೋಜನೆಗಳತ್ತ ಗಮನ ಹರಿಸುತ್ತಿದ್ದೇನೆ,” ಎಂದು ನೂತನ ನಾಯಕ ಭರವಸೆಯನ್ನು ನೀಡಿದ್ದಾರೆ.
ವಿಜಯ್ ಹಝಾರೆ ಟ್ರೋಫಿ ಪ್ರಮುಖ ವೇದಿಕೆ
ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಫೆಬ್ರವರಿಯಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ಒಡಿಐ ತಂಡವನ್ನು ನಿರ್ಧರಿಸಲು ವಿಝಯ್ ಹಝಾರೆ ಟ್ರೋಫಿ ಟೂರ್ನಿಯು ಆಯ್ಕೆದಾರರಿಗೆ ಸಹಾಯವಾಗುತ್ತದೆ. ಈ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ರಿಂಕು ಸಿಂಗ್‌ಗೆ ಅವಕಾಶ ಸಿಕ್ಕಿರಲಿಲ್ಲ. ಅವರು ಇಲ್ಲಿಯವರೆಗೆ ಕೇವಲ ಎರಡು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು ಒಂದು ವರ್ಷದ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ನಾನು ದೇವರನ್ನು ನಂಬುತ್ತೇನೆ: ರಿಂಕು ಸಿಂಗ್
“ನಾನು ದೇವರನ್ನು ನಂಬುತ್ತೇನೆ. ಕಳೆದ ವರ್ಷ ಐಪಿಎಲ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದಾಗ ನಾನು ಭಾರತ ತಂಡದ ಭಾಗವಾಗುತ್ತೇನೆ ಎಂದು ಯೋಚಿಸಿರಲಿಲ್ಲ. ಅದು ನನ್ನ ಜೀವನದಲ್ಲಿ ದೊಡ್ಡ ತಿರುವು ಎಂದು ಸಾಬೀತಾಯಿತು. ಇವತ್ತಿಗೂ ನನಗೆ ಅನ್ನಿಸುತ್ತಿದೆ ದೇವರು ನನಗಾಗಿ ಏನನ್ನಾದರೂ ನಿರ್ಧರಿಸಿದ್ದರೆ, ಅದು ಖಂಡಿತವಾಗಿಯೂ ನನಗೆ ಸಿಗುತ್ತದೆ. ಆದರೆ ಇದಕ್ಕಾಗಿ ನಾನು ನನ್ನ ಪರಿಶ್ರಮವನ್ನು ಮುಂದುವರಿಸಬೇಕು,” ಎಂದು ರಿಂಕು ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಯುಪಿಗೆ ಮೊದಲ ಎದುರಾಳಿ
ಉತ್ತರ ಪ್ರದೇಶ ತಂಡ ಡಿಸೆಂಬರ್ 21 ರಂದು ಜಮ್ಮು ಮತ್ತು ಕಾಶ್ಮೀರ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದರ ನಂತರ ಮಿಜೋರಾಂ (ಡಿಸೆಂಬರ್ 23), ತಮಿಳುನಾಡು (ಡಿಸೆಂಬರ್ 26), ಛತ್ತೀಸ್‌ಗಢ (ಡಿಸೆಂಬರ್ 28), ಚಂಡೀಗಢ (ಡಿಸೆಂಬರ್ 31) ಮತ್ತು ವಿದರ್ಭ (ಜನವರಿ 3) ವಿರುದ್ಧ ತನ್ನ ಪಂದ್ಯಗಳನ್ನು ಆಡಲಿದೆ. ಈ ಎಲ್ಲಾ ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ.
ಈ ಸುದ್ದಿಯನ್ನು ಓದಿ” IPL 2025: ಕೆಕೆಆರ್‌ಗೆ ರಿಂಕು ಸಿಂಗ್ ನಾಯಕ?