ಸಿಡ್ನಿ: ಮೆಲ್ಬರ್ನ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ನಡೆಸಿ ಭಾರೀ ಟೀಕೆ ಎದುರಿಸಿದ್ದ ರಿಷಭ್ ಪಂತ್(Rishabh Pant), ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ 50 ವರ್ಷದ ವಿಶ್ವ ದಾಖಲೆ ಜತೆಗೆ ಭಾರತೀಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 29 ಎಸೆತಗಳಿಂದ ಅರ್ಧಶತಕ ಬಾರಿಸಿ ಟೆಸ್ಟ್‌ನಲ್ಲಿ ಭಾರತ ಪರ 2ನೇ ಅತಿ ವೇಗದ ಅರ್ಧಶಕ ಸಿಡಿಸಿದ ಹಿರಿಮೆಗೆ ಪಾತ್ರರಾದರು.
ಶನಿವಾರದ ದ್ವಿತೀಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವನ್ನು 181 ರನ್‌ಗೆ ಆಲೌಟ್ ಮಾಡಿದ ಭಾರತ, ದ್ವಿತೀಯ ಇನಿಂಗ್ಸ್ ಆರಂಭಿಸಿದೆ. ಆದರೆ ಸದ್ಯ 5 ವಿಕೆಟ್ ಕಳೆದುಕೊಂಡಿದೆ. ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 22 ರನ್ ಬಾರಿಸಿದರೆ, ಇವರ ಜತೆಗಾರ ರಾಹುಲ್ 13, ಶುಭಮನ್ ಗಿಲ್ 13 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ ಅದೇ ರಾಗ ಅದೇ ಹಾಡು ಎಂಬಂತೆ ಮತ್ತೆ ಔಟ್ ಸೈಡ್ ಬಾಲ್‌ಗೆ ಬ್ಯಾಟ್ ತಾಗಿಸಿ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ AUS vs IND: ಪಂತ್ ಅರ್ಧಶತಕ; ಅಲ್ಪ ಮುನ್ನಡೆ ಸಾಧಿಸಿದ ಭಾರತ
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಬಿರುಸಿನ ಬ್ಯಾಟಿಂಗ್ ನಡೆಸಿದ ಪಂತ್ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅರ್ಧಶತಕ ಬಾರಿಸಿದರು. ಇದು ಅವರು ಬಾರಿಸಿದ 2ನೇ ಅತಿ ವೇಗದ ಅರ್ಧಶತಕ. 2022ರಲ್ಲಿ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ 28 ಎಸೆತಗಳಿಂದ ಅರ್ಧಶತಕ ಬಾರಿಸಿದ್ದು ದಾಖಲೆ.
ಕೇವಲ ಭಾರತೀಯ ದಾಖಲೆ ಮಾತ್ರವಲ್ಲದೆ ಪ್ರವಾಸಿ ಆಟಗಾರನೊಬ್ಬ ಆಸ್ಟ್ರೇಲಿಯಾದಲ್ಲಿ ಬಾರಿಸಿದ ಅತಿ ವೇಗದ ಟೆಸ್ಟ್ ಅರ್ಧಶತಕ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ರಾಯ್ ಫ್ರೆಡೆರಿಕ್ಸ್ ಹೆಸರಿನಲ್ಲಿತ್ತು. ಅವರು 1975ರಲ್ಲಿ ಪರ್ತ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 33 ಎಸೆತಗಳಿಂದ ಅರ್ಧಶತಕ ಬಾರಿಸಿದ್ದರು.
ಭಾರತ ಪರ ಅತಿ ವೇಗದ ಟೆಸ್ಟ್ ಅರ್ಧಶತಕ
ರಿಷಭ್ ಪಂತ್-28 ಎಸೆತ
ರಿಷಭ್ ಪಂತ್-29 ಎಸೆತ
ಕಪಿಲ್ ದೇವ್-30 ಎಸೆತ
ಶಾರ್ದೂಲ್ ಠಾಕೂರ್-31 ಎಸೆತ
ಯಶಸ್ವಿ ಜೈಸ್ವಾಲ್-31 ಎಸೆತ