ನವದೆಹಲಿ: ಆಸ್ಟ್ರೇಲಿಯಾ ಎದುರು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಬೆಂಬಲಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ನ ವೈಫಲ್ಯದ ಬಗ್ಗೆ ಟೀಕಿಸಬೇಕು, ಆದರೆ ಅವರು ಹೇಗೆ ವಿಫಲರಾದರು ಎಂಬುದನ್ನು ಅಲ್ಲ ಎಂದು ಹೇಳಿದ್ದಾರೆ. ಆ ಮೂಲಕ ರಿಷಭ್ ಪಂತ್ ಅವರನ್ನು ಮೂರ್ಖ ಎಂದಿದ್ದ ಸುನೀಲ್ ಗವಾಸ್ಕರ್‌ಗೆ ಮಾಂಜ್ರೇಕರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಲ್ಯಾಪ್ ಶಾಟ್ ಹೊಡೆಯುವ ಪ್ರಯತ್ನದಲ್ಲಿ ರಿಷಭ್ ಪಂತ್ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಸುನೀಲ್ ಗವಾಸ್ಕರ್, ರಿಷಭ್ ಪಂತ್ ಅವರನ್ನು ಮೂರ್ಖ…ಮೂರ್ಖ….ಮೂರ್ಖ ಎಂದು ಟೀಕಿಸಿದ್ದರು. ಏಕೆಂದರೆ ಒತ್ತಡದ ಸನ್ನಿವೇಶದಲ್ಲಿ ರಕ್ಷಣಾತ್ಮಕವಾಗಿ ಆಡಬೇಕಾಗಿತ್ತು. ಆದರೆ, ಅವರು ಅನಗತ್ಯ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟಿದ್ದರು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 30 ರನ್ ಗಳಿಸಿದ್ದರು ಹಾಗೂ ಯಶಸ್ವು ಜೈಸ್ವಾಲ್ ಅವರ ಜೊತೆ 88 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದರು.
ಅಂತಿಮವಾಗಿ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 184 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ.
Pant should be criticised only for his failures, rather than how he fails. He averages 42 in Tests with at least 3 great inngs, ever played by an Indian!
— Sanjay Manjrekar (@sanjaymanjrekar) December 31, 2024
In 42 tests he has 6 hundreds & 7 nineties. He is a great player not scoring enough runs & that’s the crux of it. #INDvsAUS
ರಿಷಭ್ ಪಂತ್‌ಗೆ ಮಾಂಜ್ರೇಕರ್ ಬೆಂಬಲ
“ವೈಫಲ್ಯದ ಬಗ್ಗೆ ಮಾತ್ರ ರಿಷಭ್ ಪಂತ್ ಅವರನ್ನು ಟೀಕಿಸಬೇಕು, ಅದು ಬಿಟ್ಟು ಅವರು ಹೇಗೆ ವಿಫಲರಾದರು ಎಂಬ ಬಗ್ಗೆ ಟೀಕಿಸಬಾರದು. ಭಾರತೀಯರು ಆಡಿದ ಕನಿಷ್ಠ ಮೂರು ಟೆಸ್ಟ್ ಇನಿಂಗ್ಸ್‌ಗಳಲ್ಲಿ ರಿಷಭ್ ಪಂತ್ ಅವರ ಸರಾಸರಿ 42 ರಷ್ಟು ಇದೆ. ಇವರು 42 ಟೆಸ್ಟ್ ಪಂದ್ಯಗಳಿಂದ ಆರು ಶತಕಗಳು ಹಾಗೂ 9 ಬಾರಿ 90ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅವರು ಸಾಕಷ್ಟ ರನ್ ಗಳಿಸುವ ಶ್ರೇಷ್ಠ ಆಟಗಾರ,” ಎಂದು ಸಂಜಯ್ ಮಾಂಜ್ರೇಕರ್ ಟ್ವೀಟ್ ಮಾಡಿದ್ದಾರೆ.
ಮೆಲ್ಬರ್ನ್ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರತ ತಂಡಕ್ಕೆ ಆಸ್ಟ್ರೇಲಿಯಾ ತಂಡ 340 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ 33 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾಗಿದ್ದ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಅವರು ನಾಲ್ಕನೇ ವಿಕೆಟ್‌ಗೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತ್ತು. ಆ ಮೂಲಕ 88 ರನ್‌ಗಳ ಜೊತೆಯಾಟವನ್ನು ಆಡಿತ್ತು. ಆದರೆ, ಟ್ರಾವಿಸ್ ಹೆಡ್ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್ ಬಳಿ ಕ್ಯಾಚ್ ಕೊಟ್ಟಿದ್ದರು.
ರಿಷಭ್ ಪಂತ್ ಬಗ್ಗೆ ಪ್ರತಿಕ್ರಿಯಿಸಿದ್ದ ರೋಹಿತ್ ಶರ್ಮಾ
“ರಿಷಭ್ ಪಂತ್ ಅವರ ಘಟನೆ ಈಗಷ್ಟೇ ನಡೆದಿದೆ. ಇದರ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ನಾವು ಪಂದ್ಯವನ್ನು ಸೋತಿದ್ದೇವೆ ಹಾಗೂ ಎಲ್ಲರೂ ಬೇಸರಗೊಂಡಿದ್ದಾರೆ. ಆದರೆ, ರಿಷಭ್ ಪಂತ್ ಅವರು ಸನ್ನಿವೇಶಕ್ಕೆ ಹೇಗೆ ಆಡಬೇಕೆಂಬುದನ್ನು ಅವರೇ ಸ್ವತಃ ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ನಾವು ಯಾರೂ ಕೂಡ ಅವರಿಗೆ ಹೇಳಬಾರದು. ಸ್ವತಃ ಅವರೇ ಅವರು ಏನು ಮಾಡಬೇಕೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ,” ಎಂದು ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಈ ಸುದ್ದಿಯನ್ನು ಓದಿ: IND vs AUS: ʻನಾವು ಹೇಳಬಾರದು, ಅವರೇ ಅರ್ಥ ಮಾಡಿಕೊಳ್ಳಬೇಕುʼ-ರಿಷಭ್ ಪಂತ್‌ಗೆ ರೋಹಿತ್ ಶರ್ಮಾ ಪಾಠ!