ಶಿಮ್ಲಾ: ಭಾರತ ತಂಡದ ಆಲ್ ರೌಂಡರ್ ಆಗಿದ್ದ, ಹಿಮಾಚಲ ಪ್ರದೇಶದ ರಿಷಿ ಧವನ್ (Rishi Dhawan) ಅವರು ಭಾರತೀಯ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಧವನ್ ಪ್ರಸಕ್ತ ಸಾಗಿತ್ತಿರುವ ವಿಜಯ್ ಹಜಾರೆ ಟ್ರೋಫಿಯ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಹಿಮಾಚಲ ಪ್ರದೇಶವು ಮುಂದಿನ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾದ ಬಳಿಕ ತಮ್ಮ ನಿವೃತ್ತಿ ಘೋಷಿಸಿದರು.
ರಿಷಿ ಧವನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯದೊಂದಿಗೆ. ಈ ಎಲ್ಲಾ ನಾಲ್ಕು ಪಂದ್ಯಗಳನ್ನು ಅವರು 2016 ರಲ್ಲಿ ಆಡಿದ್ದರು. ಅವರು ಈ ಹಿಂದೆ IPL ನಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದರು. ಮುಂಬೈ ಇಂಡಿಯನ್ಸ್ 2013ರಲ್ಲಿ ಚಾಂಪಿಯನ್ ಆದಾಗ ಈ ತಂಡದ ಭಾಗವಾಗಿದ್ದರು. ಈ ಬಾರೊಯ ಮೆಗಾ ಹರಾಜಿನಲ್ಲಿ ಅವರು ಮಾರಾಟವಾಗಲಿಲ್ಲ.
‘ಯಾವುದೇ ಪಶ್ಚಾತ್ತಾಪ ಇಲ್ಲದಿದ್ದರೂ, ನಾನು ಭಾರವಾದ ಹೃದಯದಿಂದ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಕಳೆದ 20 ವರ್ಷಗಳಿಂದ ನನ್ನ ಜೀವನವನ್ನು ವ್ಯಾಖ್ಯಾನಿಸಿದ ಕ್ರಿಡೆ ಇದು. ಈ ಆಟವು ನನಗೆ ಲೆಕ್ಕವಿಲ್ಲದಷ್ಟು ಸಂತೋಷದ ಜತೆಗೆ ಮರೆಯಲಾಗದ ನೆನಪುಗಳನ್ನು ನೀಡಿದೆ. ಕ್ರಿಕೆಟ್ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ತಂಡದ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಧವನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಐಪಿಎಲ್‌ನಲ್ಲಿ 39 ಪಂದ್ಯಗಳನ್ನಾಡಿರುವ ಧವನ್ 25 ವಿಕೆಟ್ ಮತ್ತು 210 ರನ್ ಗಳಿಸಿದ್ದಾರೆ. 134 ಲಿಸ್ಟ್ ಎ ಪಂದ್ಯಗಳಲ್ಲಿ 186 ವಿಕೆಟ್ ಮತ್ತು 2906 ರನ್ ಗಳಿಸಿದ್ದಾರೆ. 2021-22ರಲ್ಲಿ ಹಿಮಾಚಲ ತಂಡವನ್ನು ಮೊದಲ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿ ಸುತ್ತಿಗೇರಿಸಿದ್ದು ಅವರ ಕ್ರಿಕೆಟ್ ವೃತ್ತಿಜೀವನದ ದೊಡ್ಡ ಸಾಧನೆ.