Monday, 25th November 2024

Rohan Jaitley: ಅರುಣ್‌ ಜೇಟ್ಲಿ ಪುತ್ರ ಬಿಸಿಸಿಐ ನೂತನ ಕಾರ್ಯದರ್ಶಿ?

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ICC) ನೂತನ ಅಧ್ಯಕ್ಷರಾಗಿ ಜಯ್ ಶಾ (Jay Shah) ಅವರು ಈಗಾಗಲೇ ನೇಮಕವಾಗಿದ್ದಾರೆ. ಡಿ.1ರಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಬಿಸಿಸಿಐಯ ಮುಂದಿನ ಕಾರ್ಯದರ್ಶಿ(BCCI New Secretary) ಯಾರಾಗಲಿದ್ದಾರೆ ಎಂಬ ಚರ್ಚೆಗಳು ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿವೆ. ಹಾಲಿ ಉಪಾಧ್ಯಕ್ಷ ರಾಜೀವ್​ ಶುಕ್ಲಾ, ಮಹಾರಾಷ್ಟ್ರ ಬಿಜೆಪಿ ಹೆವಿವೇಟ್ ಆಶಿಶ್ ಶೇಲಾರ್, ಐಪಿಎಲ್ ಅಧ್ಯಕ್ಷರಾಗಿರುವ ಅರುಣ್‌ ಧುಮಾಲ್ ಹೆಸರು ಕೇಳಿ ಬಂದಿತ್ತು. ಆದರೆ, ಇದೀಗ ವರದಿಯಾದ ಪ್ರಕಾರ ಮಾಜಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಪುತ್ರ ರೋಹನ್‌ ಜೇಟ್ಲಿ(Rohan Jaitley) ಅವರು ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಅಧಿಕೃತ ಪ್ರಕಟನೊಂದೆ ಬಾಕಿ ಎನ್ನಲಾಗಿದೆ. ನ್ಯಾಯವಾದಿಯಾಗಿರುವ ರೋಹನ್‌ ಸದ್ಯ ದಿಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್‌ ಸಂಸ್ಥೆ (DDCA)ಯ ಅಧ್ಯಕ್ಷರಾಗಿದ್ದಾರೆ.

ಅಕ್ಟೋಬರ್ 2019 ರಿಂದ ಬಿಸಿಸಿಐ ಗೌರವ ಕಾರ್ಯದರ್ಶಿಯಾಗಿ ಮತ್ತು ಜನವರಿ 2021 ರಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಯ್‌ ಶಾ ಅವರು ಮುಂದಿನ ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷೀಯ ಪದವಿಗೆ ನಡೆದ ಚುನಾವಣೆಯಲ್ಲಿ ಜಯ್‌ ಶಾ ಅವರು ಏಕೈಕ ಸ್ಪರ್ಧಿಯಾಗಿದ್ದರು. ಹೀಗಾಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ IPL 2025 Mega Auction: ರಿಯಾದ್‌ನಲ್ಲಿ ಮೆಗಾ ಹರಾಜು; ದಿನಾಂಕ ಬಹಿರಂಗ

ಜಯ್​ ಶಾ ನಾಯಕತ್ವವು ವಿಶ್ವಾದ್ಯಂತ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ. ಐಸಿಸಿ ಪುರುಷರ ವಿಶ್ವಕಪನ್ನು ಅವರು ಹೊಸ ಎತ್ತರಕ್ಕೆ ಮುನ್ನಡೆಸಿದ್ದಾರೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು. ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ರಚನೆ, ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ, ಹೀಗೆ ಅನೇಕ ಕಾರ್ಯಗಳ ಮೂಲಕ ಕ್ರಿಕೆಟ್​ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್​ ಶಾ ಅವರದ್ದಾಗಿದೆ. ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಜಯ್​ ಶಾ ಹಲವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.