Thursday, 12th December 2024

ರೋಹಿತ್, ಪೋಲಾರ್ಡ್ ಆರ್ಭಟ: ಗೆದ್ದ ಮುಂಬೈ

ಅಬುದಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಮುಂಬೈ ತಂಡ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡವನ್ನು 48 ರನ್ನುಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈಗೆ ನಾಯಕನ ಆಟವಾಡಿದ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ ಮಿಂಚಿ ದರು. ಇದರಲ್ಲಿ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್ ಒಳಗೊಂಡಿತ್ತು. ಆ ಬಳಿಕ ಡೆತ್ ಓವರಿನಲ್ಲಿ ಆಲ್ರೌಂಡರುಗಳಾದ ಕೀರನ್ ಪೋಲಾರ್ಡ್ ಮತ್ತು ಹಾರ್ದಿಕಾ ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ನಡೆಸಿ, ತಂಡದ ಮೊತ್ತವನ್ನು ಇನ್ನೂರರ ಗಡಿ ತಂದು ನಿಲ್ಲಿಸಿದರು. ಮುಂಬೈ ಇನ್ನಿಂಗ್ಸ್ನಲ್ಲಿ ಒಟ್ಟು ಹತ್ತು ಸಿಕ್ಸರ್‌ಗಳು ಸಿಡಿದವು.

ಪಂಜಾಬ್ ಪರ ಶೆಲ್ಡನ್ ಕಾಟ್ರೆಲ್ ಮಾತ್ರ ನಿಯಂತ್ರಿತ ಬೌಲಿಂಗ್ ನಡೆಸಿ, ಒಂದು ವಿಕೆಟ್ ಕಬಳಿಸಿದರು. ಅಂತಿಮವಾಗಿ ಮುಂಬೈ ನಾಲ್ಕು ವಿಕೆಟ್ ಕಳೆದುಕೊಂಡು 191 ರನ್ ಪೇರಿಸಿತು.  ಜವಾಬಿನಲ್ಲಿ ಕಿಂಗ್ ತಂಡಕ್ಕೆ ಉತ್ತಮ ಆರಂಭ ದಕ್ಕಲಿಲ್ಲ. ನಾಯಕ ಕೆ.ಎಲ್.ರಾಹುಲ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಇನ್ನಿಂಗ್ಸ್ನಲ್ಲಿ ನಿಕೋಲಸ್ ಪೂರನ್ ಅವರದ್ದೇ ಸರ್ವಾಧಿಕ ಸ್ಕೋರ್. ಮೂರೇ ಸಿಕ್ಸರ್ ಹಾಗೂ ಹತ್ತು ಬೌಂಡರಿ ಸಿಡಿದಿದ್ದು ಮುಂಬೈ ತಂಡದ ಕರಾರುವಾಕ್ ಬೌಲಿಂಗ್‌ಗೆ ಸಾಕ್ಷಿಯಾಯಿತು. ವೇಗಿ ಜೇಮ್ಸ್ ಪ್ಯಾಟಿನ್‌ಸನ್, ಬುಮ್ರಾ ಮತ್ತು ರಾಹುಲ್ ಚಹರ್ ತಲಾ ಎರಡು ವಿಕೆಟ್ ಕಿತ್ತರು.

ಐಪಿಎಲ್‌ನಲ್ಲಿ 16-20 ಓವರುಗಳ ನಡುವೆ ಹೆಚ್ಚು ರನ್ ಬಂದಿದೆ.
2016ರಲ್ಲಿ ಗುಜರಾತ್ ಲೈಯನ್ಸ್ ವಿರುದ್ದ 112 (ರಾಯಲ್ ಚ್ಯಾಲೆಂಜರ‍್ಸ್ ಬೆಂಗಳೂರು)
2019ರಲ್ಲಿ ಕೋಲ್ಕತಾ ನೈಟ್ ರೈಡರ‍್ಸ್ ವಿರುದ್ದ 91(ರಾಯಲ್ ಚ್ಯಾಲೆಂಜರ‍್ಸ್ ಬೆಂಗಳೂರು)
ದುಬೈನಲ್ಲಿ ರಾಯಲ್ ಚ್ಯಾಲೆಂಜರ‍್ಸ್ ಬೆಂಗಳೂರು ವಿರುದ್ದ 89 (ಮುಂಬೈ ಇಂಡಿಯನ್ಸ್)
ಅಬುದಾಬಿಯಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ದ 89 (ಮುಂಬೈ ಇಂಡಿಯನ್ಸ್)

ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 191/4
ರೋಹಿತ್ ಶರ್ಮಾ 70, ಪೋಲಾರ್ಡ್ 47 ಅಜೇಯ, ಹಾರ್ದಿಕ್ ಪಾಂಡ್ಯ 30 ಅಜೇಯ
ಬೌಲಿಂಗ್: ಶೆಲ್ಡನ್ ಕಾಟ್ರೆಲ್ 20/1, ಶಮಿ 36/1, ಕೆ.ಗೌತಮ್ 45/1
ಕಿಂಗ್ಸ್ ಎಲೆವೆನ್ ಪಂಜಾಬ್ 143/8
ಮಯಾಂಕ್ ಅಗರ್ವಾಲ್ 25, ನಿಕೋಲಸ್ ಪೂರನ್ 44, ಕೃಷ್ಣಪ್ಪ ಗೌತಮ್ 22 ಅಜೇಯ
ಬೌಲಿಂಗ್: ಜೇಮ್ಸ್ ಪ್ಯಾಟಿನ್‌ಸನ್ ೨೮/೨, ಬುಮ್ರಾ ೧೮/೨, ರಾಹುಲ್ ಚಹರ್ ೨೬/೨.
ಪಂದ್ಯಶ್ರೇಷ್ಠ: ಕೀರನ್ ಪೋಲಾರ್ಡ್