Saturday, 14th December 2024

ಟೀಂ ಇಂಡಿಯಾದ ರೋ’ಹಿಟ್’ ಮೊದಲ ದ್ವಿಶತಕ ಬಾರಿಸಿದ್ದು ಇದೇ ದಿನ

ಮುಂಬೈ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ. ಬರೋಬ್ಬರಿ ಮೂರು ದ್ವಿಶತಕಗಳನ್ನ ತನ್ನ ಖಾತೆಗೆ ಸೇರಿಸಿಕೊಂಡಿರುವ, ರೋಹಿತ್, ಈ ಪೈಕಿ ಮೊದಲ ದ್ವಿಶತಕ ಸಿಡಿಸಿದ್ದು, ಇದೇ ದಿನ. ಅಂದರೆ 2013ರ ನವೆಂಬರ್ 2ರಂದು.

2010 ಫೆಬ್ರವರಿ 24 ರವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ದಾಖಲಾಗಿರಲಿಲ್ಲ. ಆದರೆ ಆ ದಿನ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ದ್ವಿಶತಕ ಸಿಡಿಸಿ ದಾಖಲೆ ಬರೆದರು. ಬಳಿಕ ಮುಂದಿನ ವರ್ಷದಲ್ಲಿ ಇದೇ ಸಾಧನೆಯನ್ನು ವೀರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಸಿಡಿಸಿ ಪುನರಾವರ್ತಿಸಿದರು.

ಎರಡು ವರ್ಷಗಳ ಬಳಿಕ ರೋಹಿತ್ ಶರ್ಮಾ ಈ ಸಾಧನೆಯನ್ನು ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಖಾತೆಯಲ್ಲಿ ಮೂರು ದ್ವಿಶತಕ ಗಳಿವೆ.

ಬೆಂಗಳೂರಿನ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿಯಾಗಿ ಕಣಕ್ಕಿಳಿದದ್ದು ಬಲಿಷ್ಠ ಆಸ್ಟ್ರೇಲಿಯಾ. ಈ ಪಂದ್ಯದಲ್ಲಿ ರೋಹಿತ್ ಸರ್ಮಾ ದಾಖಲೆಯ 16 ಸಿಕ್ಸರ್ ಸಿಡಿಸಿದ್ದಾರೆ. ಒರ್ವ ಬ್ಯಾಟ್ಸ್‌ಮನ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಯೂ ಇದಾಗಿತ್ತು. ಬಳಿಕ ಇಂಗ್ಲೆಂಡ್ ನಾಯಕ ಇನ್ನಿಂಗ್ಸ್‌ನಲ್ಲಿ 17 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಅಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 158 ಎಸೆತಗಳನ್ನು ಎದುರಿಸಿ 209 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ ಹಾಗೂ 16 ಭರ್ಜರಿ ಸಿಕ್ಸರ್‌ಗಳು ಸೇರಿಕೊಂಡಿತ್ತು.