ಮುಂಬಯಿ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್(India vs New Zealand 3rd Test) ಸರಣಿಯಲ್ಲಿ 3-0 ವೈಟ್ ವಾಶ್ ಮುಖಭಂಗ ಎದುರಿಸಿದ ಬಳಿಕ ಸೋಲಿನ ಹೊಣೆಯನ್ನು ತಾನೇ ಹೊತ್ತುಕೊಳ್ಳುವುದಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಹೇಳಿದ್ದಾರೆ. ʼಇದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ಸರಣಿ. ತವರಿನಲ್ಲಿ ಈ ರೀತಿ ಸೋತಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲʼ ಎಂದು ಇದೇ ವೇಳೆ ಹೇಳಿದರು.
ಗೆಲುವಿಗೆ 147 ರನ್ಗಳ ಸಣ್ಣ ಮೊತ್ತದ ಗುರಿ, ಇನ್ನೂ 2 ವರೆ ದಿನಗಳ ಆಟ ಬಾಕಿ ಇತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಲಾಗದೆ ಭಾರತ 25 ರನ್ ಅಂತರದ ಸೋಲು ಕಂಡಿತು. ಮೂರು ಪಂದ್ಯಗಳನ್ನು ಸೋಲುವ ಮೂಲಕ ಭಾರತ ತವರಿನಲ್ಲಿ ಮೊದಲ ಬಾರಿಗೆ ಎರಡಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಲ್ಲಿ ವೈಟ್ ವಾಶ್ ಅವಮಾನ ಎದುರಿಸಿತು.
ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ‘ತವರಿನಲ್ಲೇ ಸರಣಿ ಸೋತಿರುವ ನೋವನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲೂ ಸಾಧ್ಯವಿಲ್ಲ. ನಾಯಕನಾಗಿ ಅತ್ಯುತ್ತಮವಾಗಿ ಆಡಲು ನಮಗೆ ಸಾಧ್ಯವಾಗಲಿಲ್ಲ. ಸರಣಿಯುದ್ದಕ್ಕೂ ನ್ಯೂಜಿಲೆಂಡ್ ಉತ್ತಮವಾಗಿ ಆಡಿದೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ. ನಮ್ಮ ಯೋಜನೆಗಳೆಲ್ಲ ತಲೆಕೆಳಗಾಯಿತು. ಹೀಗಾಗಿ ಅತ್ಯುತ್ತಮ ಆಟ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ ಈ ಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಮತ್ತು ಬ್ಯಾಟಿಂಗ್ ಮಾಡುವಲ್ಲಿಯೂ ಅತ್ಯುತ್ತಮನಾಗಲಿಲ್ಲ. ಒಟ್ಟಾರೆ ನಮ್ಮ ಪ್ರದರ್ಶನ ಕಳಪೆಯಾಗಿತ್ತು’ ಎಂದರು.
ಇದನ್ನೂ ಓದಿ IND vs NZ: ತವರಿನಲ್ಲೇ ಭಾರತಕ್ಕೆ ವೈಟ್ ವಾಶ್ ಮುಖಭಂಗ
ಭಾರತ ತಂಡದ ಸೋಲಿಗೆ ಮಾಜಿ ಆಟಗಾರರು ಮತ್ತು ಟೀಮ್ ಇಂಡಿಯಾದ ಅಭಿಮಾನಿಗಳು ನಾಯಕ ರೋಹಿತ್, ಕೋಚ್ ಗಂಭೀರ್ ವಿರುದ್ಧ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಗಂಭೀರ್ ಅವರನ್ನು ಕೋಚಿಂಗ್ ಹುದ್ದೆಯಿಂದ ತಕ್ಷಣ ಕೆಳಗಿಳಿಸಬೇಕು ಎಂದು ಒತ್ತಾಯಿಸಲಾರಂಭಿಸಿದ್ದಾರೆ. ತವರಿನಲ್ಲೇ ಮುನ್ನಗರಿಸಿದ ಭಾರತ ಆಸೀಸ್ನ ವೇಗದ ಪಿಚ್ನಲ್ಲಿ ಇನ್ನೆಷ್ಟು ಕಳಪೆ ಪ್ರದರ್ಶನ ತೋರಬಹುದು ಎಂಬ ಭಯ ಅಭಿಮಾನಿಗಳದ್ದು.
ಸೋಲಿನಿಂದ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾದಿ ಕೂಡ ಕಠಿಣಗೊಂಡಿದೆ. ಇದುವರೆಗೂ ಅಂಕಪಟ್ಟಿಯಲ್ಲಿ(WTC Points Table) ಅಗ್ರಸ್ಥಾನ ಕಾಯ್ದುಕೊಂಡಿದ್ದ ಭಾರತ ಸೋಲಿನಿಂದ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಜಾರಿದೆ. 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ(Australia) ಅಗ್ರಸ್ಥಾನಕ್ಕೇರಿದೆ. ಫೈನಲ್ ಪ್ರವೇಶಿಸಬೇಕಿದ್ದರೆ ರೋಹಿತ್ ಪಡೆಗೆ ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ.
ಭಾರತ ಫೈನಲ್ ಪ್ರವೇಶಿಸಬೇಕಿದ್ದರೆ, ಭಾರತ ಇನ್ನುಳಿದ 5 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು. ಒಂದೊಮ್ಮೆ ಭಾರತ ಉಳಿದ 5ರಲ್ಲಿ 2ರಲ್ಲಿ ಮಾತ್ರ ಗೆದ್ದು, ಉಳಿದ 3ರಲ್ಲಿ ಡ್ರಾ ಸಾಧಿಸಿದರೂ, ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಆದರೆ ಆಗ ಫೈನಲ್ ಭವಿಷ್ಯವನ್ನು ಇತರ ಸರಣಿಗಳ ಫಲಿತಾಂಶಗಳು ನಿರ್ಧರಿಸುತ್ತವೆ. ಸದ್ಯ ಭಾರತ (58.33), ಆಸ್ಟ್ರೇಲಿಯಾ(62.50), ಶ್ರೀಲಂಕಾ(55.56), ನ್ಯೂಜಿಲ್ಯಾಂಡ್(54.55) ಗೆಲುವಿನ ಪ್ರತಿಶತ ಹೊಂದಿದೆ.