Thursday, 26th December 2024

Rohit Sharma: ಕೊಹ್ಲಿ ಫಾರ್ಮ್‌ ಬಗ್ಗೆ ಕೇಳಿದ ಪ್ರಶ್ನೆಗೆ ರೋಹಿತ್‌ ವ್ಯಂಗ್ಯ ಉತ್ತರ

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯ ಡಿ.26 ರಂದು ಆರಂಭಗೊಳ್ಳಲಿದೆ. ಐತಿಹಾಸಿಕ ಮೆಲ್ಬರ್ನ್‌ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ(Rohit Sharma) ಅವರು ವಿರಾಟ್ ಕೊಹ್ಲಿ(Virat Kohli) ಬ್ಯಾಟಿಂಗ್‌ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.

ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ಪದೇಪದೆ ಮಾಡಿದ ತಪ್ಪನ್ನೇ ಮಾಡಿ ಔಟ್ ಆಗುತ್ತಿದ್ದಾರೆ. ಆಫ್ ಸ್ಟಂಪ್ ಆಚೆ ಹೋಗುವ ಚೆಂಡನ್ನು ಅನಗತ್ಯವಾಗಿ ಹೊಡೆಯಲು ಹೋಗಿ ಔಟಾಗುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ರೋಹಿತ್‌ಗೆ ಪ್ರಶ್ನೆ ಮಾಡಲಾಯಿತು.

ಇದಕ್ಕೆ ಉತ್ತರಿಸಿದ ರೋಹಿತ್‌, ನೀವೇ ಹೇಳುತ್ತೀರಿ ಕೊಹ್ಲಿ ಆಧುನಿಕ ಜಗತ್ತಿನ ಶ್ರೇಷ್ಠ ಕ್ರಿಕೆಟಿಗ ಎಂದು. ಹಾಗಿದ್ದ ಮೇಲೆ ಶ್ರೇಷ್ಠ ಕ್ರಿಕೆಟಿಗನಿಗೆ ತನಗೆ ಯಾವುದು ಸರಿ ಮತ್ತು ತಪ್ಪು ಎಂದೂ ಗೊತ್ತಿರುತ್ತದೆ ಎಂದು ರೋಹಿತ್‌ ಹೇಳಿದರು. ಇದೇ ವೇಳೆ ಕೊಹ್ಲಿಯ ಫಾರ್ಮ್ ನಮಗೆ ಚಿಂತೆಯಲ್ಲ ಎಂದು ಹೇಳುವ ಮೂಲಕ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಅಭ್ಯಾಸದ ವೇಳೆ ರೋಹಿತ್ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದ ಬಗ್ಗೆ ಅಪ್‌ಡೇಟ್‌ ನೀಡಿದ ರೋಹಿತ್‌, ಇದೊಂದು ಸಣ ಪ್ರಮಾಣದ ಗಾಯ, ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಡಲಿದ್ದೇನೆ. ಆದರೆ ಯಾವ ಕ್ರಮಾಂಕ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ತಂಡಕ್ಕೆ ಯಾವುದು ಉತ್ತಮವೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಅನುಭವಿ ಸ್ಪಿನ್ನರ್‌ಗಳಾದ ಕುಲ್‌ದೀಪ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಇದ್ದರೂ ಅವರನ್ನು ನಾಲ್ಕನೇ ಮತ್ತು ಐದನೇ ಪಂದ್ಯಕ್ಕೆ ಆಯ್ಕೆ ಮಾಡದೆ ಯುವ ಆಟಗಾರ ತನುಷ್‌ ಕೋಟ್ಯಾನ್‌ ಆಯ್ಕೆ ಮಾಡಿದ ಬಗ್ಗೆಯೂ ಮಾತನಾಡಿದ ರೋಹಿತ್‌, ವೀಸಾ ಸಮಸ್ಯೆಯಿಂದಾಗಿ ಅಕ್ಷರ್‌ ಮತ್ತು ಕುಲ್‌ದೀಪ್‌ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದರು. ತನುಷ್ ಒಂದು ತಿಂಗಳ ಹಿಂದೆ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗೆ ಬಂದಿದ್ದರು. ಹೀಗಾಗಿ ಅವರನ್ನು ಆಯ್ಕೆ ಮಾಡಲಾಯಿತು. ಅವರು ಕೂಡ ಭಾರತ ಕ್ರಿಕೆಟ್‌ ತಂಡದ ಭವಿಷ್ಯದ ಆಟಗಾರ. ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಹಲವು ಶ್ರೇಷ್ಠ ಇನಿಂಗ್ಸ್‌ ಆಡಿದ್ದಾರೆ ಎಂದು ರೋಹಿತ್‌ ಹೇಳಿದರು.