Monday, 25th November 2024

Rohit Sharma: ಪರ್ತ್‌ನಲ್ಲಿ ಪಂದ್ಯ ವೀಕ್ಷಿಸಿ, ಅಭ್ಯಾಸ ಆರಂಭಿಸಿದ ರೋಹಿತ್‌ ಶರ್ಮ

ಪರ್ತ್‌: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಆಸೀಸ್‌(IND vs AUS) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ(Rohit Sharma) ಪರ್ತ್‌ನಲ್ಲಿರುವ ಭಾರತೀಯ ತಂಡವನ್ನು ಸೇರಿಕೊಂಡಿದ್ದಾರೆ. ಭಾನುವಾರ ಪರ್ತ್‌ಗೆ ತಲುಪಿದ್ದ ರೋಹಿತ್‌ ಸೋಮವಾರ ಕೋಚ್‌ ಗಂಭೀರ್‌ ಜತೆ ಪಂದ್ಯ ವೀಕ್ಷಿಸಿದ್ದಾರೆ. ಕೆಲ ಕಾಲ ಪಂದ್ಯ ವೀಕ್ಷಿಸಿದ ರೋಹಿತ್‌ ಆ ಬಳಿಕ ನೆಟ್ಸ್‌ನಲ್ಲಿ ಪಿಂಕ್‌ ಬಾಲ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು.

ರೋಹಿತ್‌ ಶರ್ಮ ಟೀಮ್‌ ಇಂಡಿಯಾ ಡಗೌಟ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಫೋಟೊ ವೈರಲ್‌ ಆಗಿದೆ. ರೋಹಿತ್‌ ಕ್ಯಾನ್‌ಬೆರಾದಲ್ಲಿ ನ. 30-ಡಿ. ಒಂದರಂದು ನಡೆಯುವ  ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ 3 ದಿನಗಳ ಅಹರ್ನಿಶಿ ಅಭ್ಯಾಸ ಪಂದ್ಯದಲ್ಲಿ ರೋಹಿತ್‌ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಾದ ಬಳಿಕ ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ರೋಹಿತ್‌ ತಂಡದ ನಾಯಕತ್ವವಹಿಸಿಕೊಂಡು ಆಡಲಿದ್ದಾರೆ. ರೋಹಿತ್‌ ಮೊದಲ ಪಂದ್ಯಕ್ಕೆ ಅಲಭ್ಯರಾದ ಕಾರಣ ಜಸ್‌ಪ್ರೀತ್‌ ಬುಮ್ರಾ ತಂಡವನ್ನು ಮುನ್ನಡೆಸಿದ್ದರು.

ರೋಹಿತ್‌ ಆಗಮನದಿಂದ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ರಾಹುಲ್‌ ದ್ವಿತೀಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಬಹುದು. ಶುಭಮನ್‌ ಗಿಲ್‌ ಕೂಡ ದ್ವಿತೀಯ ಪಂದ್ಯದ ವೇಳೆಗೆ ಚೇತರಿಕೆ ಕಾಣುವ ನಿರೀಕ್ಷೆ ಇದ್ದು ಅವರು ಕೂಡ ಆಡಬಹುದು ಆಗ ಪಡಿಕ್ಕಲ್‌ ಜಾಗ ಬಿಡಬೇಕಾದೀತು. ರಾಹುಲ್‌ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಹುದು.

ಸದ್ಯ ಪರ್ತ್‌ ಟೆಸ್ಟ್‌ನಲ್ಲಿ ಬಿಗಿ ಹಿಡಿತ ಸಾಧಿಸಿರುವ ಟೀಮ್‌ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿದೆ. ಗೆಲುವಿಗೆ ದಾಖಲೆಯ 534 ರನ್ ಸವಾಲು ಪಡೆದಿರುವ ಆಸ್ಟ್ರೇಲಿಯಾ 7 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದೆ. ಇನ್ನೂ ಒಂದು ದಿನ ಆಟ ಬಾಕಿ ಇದೆ. ಹೀಗಾಗಿ ಭಾರತಕ್ಕೆ ಗೆಲುವು ಖಚಿತ ಎನ್ನಬಹುದು. ಉಳಿದಿರುವ ನಾಲ್ಕು ವಿಕೆಟ್‌ ಕಿತ್ತರೆ ಭಾರತ ಪರ್ತ್‌ನಲ್ಲಿ ವಿಜಯ ಪತಾಕೆ ಹಾರಿಸಲಿದೆ.

ಮೂರನೇ ದಿನದಾಟದಲ್ಲಿ ಭಾರತ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಸಿಡಿಸಿದ ಸೆಂಚುರಿ, ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ (37*) ಉಪಯುಕ್ತ ಬ್ಯಾಟಿಂಗ್ ಬಲದಿಂದ 134.3 ಓವರ್‌ಗಳಲ್ಲಿ 6 ವಿಕೆಟ್‌ಗೆ 487 ರನ್‌ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು.