Sunday, 29th September 2024

Rohit Sharma: ಟಿ20 ನಿವೃತ್ತಿಯ ಅಸಲಿ ಕಾರಣ ತಿಳಿಸಿದ ರೋಹಿತ್‌

Rohit Sharma

ಕಾನ್ಪುರ: ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ರೋಹಿತ್ ಶರ್ಮಾ(Rohit Sharma) ನೇತೃತ್ವದ ಭಾರತ ತಂಡವು ಜೂನ್‌ 29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್‌ ಬಳಿಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಟಿ20 ಕ್ರಿಕೆಟ್‌ಗೆ ವಿದಾಯ(rohit sharma t20 retirement) ಹೇಳಿದ್ದರು. ವಿದಾಯ ಹೇಳಿ ಮೂರು ತಿಂಗಳು ಕಳೆದ ಬಳಿ ರೋಹಿತ್‌ ತಮ್ಮ ನಿವೃತ್ತಿಯ ಕಾರಣ ಬಹಿರಂಗ ಪಡಿಸಿದ್ದಾರೆ.

ಸ್ಥಳೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ರೋಹಿತ್‌ ಈ ವಿಚಾರವನ್ನು ತಿಳಿಸಿದರು. ʼನಾನು ಸಾಕಷ್ಟು ಸಮಯದವರೆಗೆ ಟಿ20 ಪಂದ್ಯಗಳನ್ನು ಆಡಿದ್ದೇನೆ ಇದೇ ಕಾರಣಕ್ಕೆ ನಿವೃತ್ತಿ ಹೊಂದಲು ಬಯಸಿದ್ದು. ನಾನು ಚುಟುಕು ಮಾದರಿಯಲ್ಲಿ ಭಾರತ ತಂಡವನ್ನು 17 ವರ್ಷಗಳ ಕಾಲ ಪ್ರತಿನಿಧಿಸಿದ್ದೇನೆ. ಚೊಚ್ಚಲ ಟಿ20 ವಿಶ್ವಕಪ್‌ನಿಂದ ಇದುವರೆಗೆ ಆಡಿದ ಎಲ್ಲ ವಿಶ್ವಕಪ್‌ ಟೂರ್ನಿಯಲ್ಲಿಯೂ ಆಡಿದ್ದೇನೆ. ಒಂದು ಬಾರಿ ಆಟಗಾರನಾಗಿ ಮತ್ತೊಂದು ಬಾರಿ ನಾಯಕನಾಗಿ ವಿಶ್ವಕಪ್‌ ಗೆದ್ದಿದ್ದೇನೆ. ಇದಕ್ಕಿಂತ ಇನ್ನು ಏನು ಬೇಕು. ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಸಾಕಷ್ಟು ಯುವ ಆಟಗಾರರಿದ್ದಾರೆ. ಅವರಿಗೂ ಒಂದು ಅವಕಾಶ ನೀಡಬೇಕು ಎನ್ನುವುದು ನನ್ನ ನಿಲುವಾಗಿತ್ತು. ಹೀಗಾಗಿ ನಾನು ಚುಟುಕು ಮಾದರಿಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದೆʼ ಎಂದು ಹೇಳಿದರು.

ಇದನ್ನೂ ಓದಿ IND vs BAN: 3ನೇ ದಿನವೂ ಮಳೆಯದ್ದೇ ಆಟ; ಒಂದೂ ಎಸೆತ ಕಾಣದೆ ದಿನದಾಟ ರದ್ದು

ʼಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಈಗಲೂ ನಾನು ಮಾನಸಿಕವಾಗಿ ಫಿಟ್ ಆಗಿದ್ದೇನೆ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಯಕನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ. ಯುವ ಆಟಗಾರರನ್ನು ಬೆಳೆಸುವ ನಿಟ್ಟಿನಲ್ಲಿ ಅವರಿಗೆ ದಾರಿ ಮಾಡಿಕೊಡುವುದು ಮತ್ತು ಭಾರತ ಕ್ರಿಕೆಟ್‌ ಮುಂದುವರಿಯುವ ನಿಟ್ಟಿನಲ್ಲಿ ನಾನು ಚುಟುಕು ಮಾದರಿಯಿಂದ ಹಿಂದೆ ಸರಿದೆʼ ಎಂದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಸದ್ಯ ರೋಹಿತ್‌ ಶರ್ಮ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಬ್ಯೂಸಿಯಾಗಿದ್ದಾರೆ. ಬಾಂಗ್ಲಾ ಸರಣಿ ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ, ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.