Sunday, 24th November 2024

S. Sreesanth: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶ್ರೀಶಾಂತ್ ಬೌಲಿಂಗ್‌ ಕೋಚ್‌

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ವೇಗಿ ಕೇರಳದ ಎಸ್​. ಶ್ರೀಶಾಂತ್(S. Sreesanth)​ ಅವರು ಮುಂಬರುವ ಐಪಿಎಲ್‌ 18ನೇ(IPL 2025) ಆವೃತ್ತಿಗೆ ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಈ ಹಿಂದೆ ಚೆನ್ನೈ ತಂಡದ ಬೌಲಿಂಗ್‌ ಕೋಚ್‌ ಆಗಿದ್ದ ವೆಸ್ಟ್‌ ಇಂಡೀಸ್‌ನ ಮಾಜಿ ಆಟಗಾರ ಡ್ವೇನ್‌ ಬ್ರಾವೊ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೇಡರ್ಸ್‌(kolkata knight riders) ತಂಡದ ಮೆಂಟರ್‌ ಆಗಿ ನೇಮಕವಾಗಿದ್ದಾರೆ. ಹೀಗಾಗಿ ಇವರಿಂದ ತೆರವಾದ ಸ್ಥಾನಕ್ಕೆ ಶ್ರೀಶಾಂತ್ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ.

2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದಾಗ ಶ್ರೀಶಾಂತ್‌ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿತ್ತು. ಸುದೀರ್ಘ ವಿಚಾರಣೆಯ ನಂತರ ದೆಹಲಿ ಹೈಕೋರ್ಟ್ ಇವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಇದಾದ ಬಳಿಕ ಬಿಸಿಸಿಐ ಕೂಡ ಶ್ರೀಶಾಂತ್ ಅವರ ನಿಷೇಧವನ್ನು 7 ವರ್ಷಕ್ಕಿಳಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಈ ನಿಷೇಧದಿಂದ ಮುಕ್ತರಾಗಿದ್ದರು. ಆದರೆ ಈ ನಿಷೇಧ ಮುಗಿಯುವಷ್ಟರಲ್ಲಿ ಅವರ ವಯಸ್ಸು ಕೂಡ 40ರ ಸನಿಹಕ್ಕೆ ಬಂದಿತ್ತು. ಹೀಗಾಗಿ ಅವರ ಕ್ರಿಕೆಟ್ ಜೀವನ ಫಿಕ್ಸಿಂಗ್​ನಿಂದಾಗಿ ದುರಂತ ಅಂತ್ಯ ಕಂಡಿತ್ತು. ಸದ್ಯ ಶ್ರೀಶಾಂತ್‌ ಅವರು ಕಾಮೆಂಟ್ರಿ ಮತ್ತು ಮಾಜಿ ಆಟಗಾರರ ʼಲೆಜೆಂಡ್ಸ್‌ ಲೀಗ್‌’ ಕ್ರಿಕೆಟ್‌ ಲೀಗ್‌ನಲ್ಲಿ ಆಡುತ್ತಿದ್ದಾರೆ.

ಶ್ರೀಶಾಂತ್‌ 2005-2011ರ ಅವಧಿಯಲ್ಲಿ ಭಾರತದ ಪರ 27 ಟೆಸ್ಟ್‌, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 87, 75 ಹಾಗೂ 7 ವಿಕೆಟ್‌ ಉರುಳಿಸಿದ್ದಾರೆ. 2007ರ ಟಿ20 ವಿಶ್ವಕಪ್‌ ಹಾಗೂ 2011ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯನೆಂಬುದು ಶ್ರೀಶಾಂತ್‌ ಪಾಲಿನ ಹೆಗ್ಗಳಿಕೆ. 2011ರಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಒಟ್ಟು 44 ಪಂದ್ಯಗಳನ್ನಾಡಿದ್ದ ಶ್ರೀಶಾಂತ್ 40 ವಿಕೆಟ್ ಕಬಳಿಸಿ ಮಿಂಚಿದ್ದರು.

ಇದನ್ನೂ ಓದಿ IPL 2025 : ಸೌದಿ ಅರೇಬಿಯಾ ಅಲ್ಲ! ಈ ದೇಶದಲ್ಲಿ ಈ ಬಾರಿ ಐಪಿಎಲ್ ಮೆಗಾ ಹರಾಜು

ಮುಂಬೈ ಇಂಡಿಯನ್ಸ್‌ಗೆ ಪಾರಸ್‌ ಮಾಂಬ್ರೆ ಬೌಲಿಂಗ್‌ ಕೋಚ್‌

ಮುಂಬೈ ಇಂಡಿಯನ್ಸ್‌(Mumbai Indians) ಫ್ರಾಂಚೈಸಿ ಭಾರತದ ಮಾಜಿ ಕೋಚ್ ಪಾರಸ್‌ ಮಾಂಬ್ರೆ ಅವರನ್ನು ಬೌಲಿಂಗ್‌ ಕೋಚ್‌(Mumbai Indians bowling coach) ಆಗಿ ನೇಮಕ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಇದೇ ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ಅವರು ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.