Saturday, 28th December 2024

RSA vs PAK: ಸಿರಾಜ್‌ರಂತೆ ಬೇಲ್ಸ್‌ ಬದಲಿಸಿ ಅದೃಷ್ಟ ಪರೀಕ್ಷಿಸಿದ ಬಾಬರ್‌ ಅಜಂ

ಸೆಂಚುರಿಯನ್‌: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಂ(Babar Azam) ಬೇಲ್ಸ್‌ ಬದಲಾಯಿಸುವ ಮೂಲಕ ಮೈದಾನದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಈ ಘಟನೆಯ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾಬರ್‌ ಈ ಅದೃಷ್ಟ ಪರೀಕ್ಷೆ ನಡೆಸಿದ್ದು ದಕ್ಷಿಣ ಆಫ್ರಿಕಾ(RSA vs PAK) ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್‌ನ 2ನೇ ದಿನದಾಟದಲ್ಲಿ.

ಇತ್ತೀಚೆಗೆ ಆಸೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ವೇಗಿ ಮೊಹಮ್ಮದ್‌ ಸಿರಾಜ್‌(Mohammed Siraj) ಮತ್ತು ಮಾರ್ನಸ್‌ ಲಬುಶೇನ್‌(Marnus Labuschagne) ನಡೆಸಿದ ಬೆಲ್ಸ್‌ ವಾರ್‌ ನಡೆಸಿದ್ದ ವಿಡಿಯೊ ವೈರಲ್‌ ಆಗಿತ್ತು. ಟೆಸ್ಟ್ ಕ್ರಿಕೆಟ್​ನಲ್ಲಿ ಈ ರೀತಿಯ ಬೇಲ್ಸ್ ಬದಲಾವಣೆಯ ಟ್ರಿಕ್ ಪರಿಚಯಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್. ಎದುರಾಳಿ ತಂಡದ ವಿಕೆಟ್ ಬೀಳದಿದ್ದಾಗ ಬ್ರಾಡ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡುತ್ತಿದ್ದರು. ಅವರು ಈ ರೀತಿ ಬೇಲ್ಸ್‌ ಬದಲಿಸಿದಾಗಲೆಲ್ಲ ವಿಕೆಟ್‌ ಪತನಗೊಂಡಿದೆ. ಇದೇ ಉಪಾಯವನ್ನು ಈಗ ಹಲವು ಕ್ರಿಕೆಟ್‌ ಆಟಗಾರರು ಪ್ರಯೋಗಿಸುತ್ತಿದ್ದಾರೆ.

ಸೋಲಿನ ಭೀತಿಯಲ್ಲಿ ಪಾಕ್‌

ಮೊದಲ ಇನಿಂಗ್ಸ್‌ನಲ್ಲಿ 211 ರನ್‌ಗೆ ಆಲೌಟ್‌ ಆದ ಪಾಕಿಸ್ತಾನ ಇದೀಗ ದ್ವಿತೀಯ ಇನಿಂಗ್ಸ್‌ನಲ್ಲಿ 88ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ. ಇನ್ನೂ ಮೂರು ದಿನ ಬಾಕಿ ಇರುವ ಕಾರಣ ಪಾಕ್‌ ಸೋಲಿನ ಭೀತಿಯಿಂದ ಪಾರಾಗುವುದು ಕಷ್ಟ ಸಾಧ್ಯ. ಪವಾಡವೊಂದು ಅಥವಾ ಮಳೆಯಿಂದ ಪಂದ್ಯ ರದ್ದಾದರೆ ಮಾತ್ರ ಸೋಲು ತಪ್ಪಿಸಬಹುದಷ್ಟೆ.

ಭಾರತಕ್ಕೂ ಸಂಕಷ್ಟ

ಶುಕ್ರವಾರ ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 474 ರನ್‌ಗಳಿಗೆ ಆಲ್‌ಔಟ್‌ ಮಾಡಿದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಹಿನ್ನಡೆಯ ಭೀತಿಗೆ ಒಳಗಾಗಿದೆ.