ಡರ್ಬನ್: ಜಾರ್ಜ್ ಲಿಂಡೆ ಅವರ ಆಲ್‌ರೌಂಡರ್ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ಟಿ20ಐ ಪಂದ್ಯದಲ್ಲಿ(SA vs PAK) ಪಾಕಿಸ್ತಾನ ತಂಡದ ಎದುರು 11 ರನ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಟಿ20 ಸರಣಿಯಲ್ಲಿ ಹರಿಣ ಪಡೆ 1-0 ಮುನ್ನಡೆ ಪಡೆದಿದೆ. ಸ್ಪೋಟಕ ಬ್ಯಾಟ್ ಮಾಡಿದ್ದ ಜಾರ್ಜ್ ಲಿಂಡೆ ಕೇವಲ 24 ಎಸೆತಗಳಲ್ಲಿ 48 ರನ್‌ಗಳನ್ನು ಸಿಡಿಸಿದ್ದರೆ, ನಂತರ ಬೌಲಿಂಗ್‌ನಲ್ಲಿ ಕೇವಲ 21 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 184 ರನ್‌ಗಳ ಗುರಿಯನ್ನು ಹಿಂಬಾಲಿಸಿ ಪಾಕಿಸ್ತಾನ ತಂಡ, ಮೊಹಮ್ಮದ್ ರಿಝ್ವಾನ್ ಅರ್ಧಶತಕದ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು. ಪಾಕಿಸ್ತಾನ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 172 ರನ್‌ಗಳಿಗೆ ಸೀಮಿತವಾಯಿತು.
ಬಾಬರ್ ಆಝಮ್ ವೈಫಲ್ಯ
ಮೊಹಮ್ಮದ್ ರಿಝ್ವಾನ್ ಜೊತೆ ಇನಿಂಗ್ಸ್ ಆರಂಭಿಸಿದ ಬಾಬರ್ ಆಝಮ್ ಎದುರಿಸಿದ ನಾಲ್ಕು ಎಸೆತಗಳಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಮತ್ತೊಮ್ಮೆ ನಿರಾಶೆ ಮೂಡಿಸಿದರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ರಿಝ್ವಾನ್ ಮತ್ತು ಸೈಮ್ ಆಯುಬ್ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 40 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಆರಂಭಿಕ ಆಘಾತ ಅನುಭವಿಸಿದ್ದ ಪಾಕಿಸ್ತಾನ ತಂಡವನ್ನು ಮೇಲೆತ್ತಿತ್ತು. ಕೇವಲ 15 ಎಸೆತಗಳಲ್ಲಿ 31 ರನ್ ಸಿಡಿಸಿದ್ದ ಸೈಮ್ ಆಯುಬ್ ಔಟ್ ಆದರು.
ಮೊಹಮ್ಮದ್ ರಿಝ್ವಾನ್ ಅರ್ಧಶತಕ ವ್ಯರ್ಥ
ನಂತರ ತಯಬ್ ತಾಹಿರ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಹಾಗೂ ಕಳೆ ಮಧ್ಯಮ ಕ್ರಮಾಂಕದಲ್ಲಿ ಆಡಿದ ಬ್ಯಾಟ್ಸ್‌ಮನ್‌ಗಳು, ಆರಂಭಿಕ ಮೊಹಮ್ಮದ್ ರಿಝ್ವಾನ್‌ಗೆ ಸಾಥ್ ನೀಡುವಲ್ಲಿ ವಿಫಲರಾದರು. ಜಾರ್ಜ್ ಲಿಂಡೆ ಸೇರಿದಂತೆ ಹರಿಣ ಪಡೆಯ ಬೌಲಿಂಗ್ ದಾಳಿಯ ಎದುರು ಉಸ್ಮಾನ್ ಖಾನ್, ಶಾಹೀನ್ ಅಫ್ರಿದಿ, ಇರ್ಫಾನ್ ಖಾನ್ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ನಾಯಕ ಮೊಹಮ್ಮದ್ ರಿಝ್ವಾನ್ 62 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 74 ರನ್‌ಗಳನ್ನು ಕಲೆ ಹಾಕಿದರು. ಆದರೆ, ಇವರು ಕೊನೆಯ ಓವರ್‌ನಲ್ಲಿ ಕ್ವೆನಾ ಎಂಫಾಕ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಪಾಕಿಸ್ತಾನ ಸೋಲು ಒಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಜಾರ್ಜ್ ಲಿಂಡೆ ಬೌಲ್ ಮಾಡಿದ ನಾಲ್ಕು ಓವರ್‌ನಲ್ಲಿ ಕೇವಲ 21 ರನ್ ನೀಡಿ 4 ವಿಕೆಟ್‌ಗಳನ್ನು ಕಿತ್ತರು.
ಅರ್ಧಶತಕ ಸಿಡಿಸಿದ್ದ ಡೇವಿಡ್ ಮಿಲ್ಲರ್
ಇದಕ್ಕೂ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟ್ ಮಾಡಿದ್ದ ಡೇವಿಡ್ ಮಿಲ್ಲರ್, ಪಾಕ್ ಬೌಲರ್‌ಗಳ ಬೆವರಿಳಿಸಿದರು. ಇವರು ಎದುರಿಸಿದ 40 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 82 ರನ್‌ಗಳನ್ನು ಸಿಡಿಸಿದರು. ಆ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು.
ನಂತರ ಡೆತ್ ಓವರ್‌ಗಳಲ್ಲಿ ಕ್ರೀಸ್‌ಗೆ ಬಂದಿದ್ದ ಜಾರ್ಜ್ ಲಿಂಡೆ ಕೂಡ ಸ್ಪೋಟಕ ಬ್ಯಾಟ್ ಮಾಡಿದ್ದರು. ಇವರು ಎದುರಿಸಿದ್ದ ಕೇವಲ 24 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 48 ರನ್‌ಗಳನ್ನು ಸಿಡಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 183 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
ಈ ಸುದ್ದಿಯನ್ನು ಓದಿ: Heinrich Klaasen: ಸಿಕ್ಸರ್ ಮೂಲಕ ದಾಖಲೆ ಬರೆದ ಹೆನ್ರಿಚ್ ಕ್ಲಾಸೆನ್