ಕೇಪ್ ಟೌನ್: ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್-ಬ್ಯಾಟರ್ ಹೆನ್ರಿಚ್ ಕ್ಲಾಸೆನ್‌ಗೆ(Heinrich Klaasen) ದಂಡ ವಿಧಿಸಲಾಗಿದೆ. ಗುರುವಾರ ಕೇಪ್ ಟೌನ್‌ನಲ್ಲಿ ನಡೆದ ಪಾಕಿಸ್ತಾನ(SA vs PAK) ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ನೀತಿ ಸಂಹಿತೆಯ 1 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಲಾಸೆನ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಕ್ಲಾಸೆನ್ ಈ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿ 74 ಎಸೆತಗಳಲ್ಲಿ 97 ರನ್ ಬಾರಿಸಿದ್ದರು. ಪಂದ್ಯ ಮುಕ್ತಾಯ ಬಳಿಕ ಸೋಲಿನ ಸಿಟ್ಟಿನಲ್ಲಿ ಕ್ಲಾಸೆನ್ ಅವರು ಕಾಲಿನಿಂದ ಸ್ಟಂಪ್‌ಗೆ ಒದ್ದಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಉಲ್ಲಂಘನೆಯಾಗಿದೆ. ಅವರ ಅಶಿಸ್ತಿಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ಅಪರಾಧವಾಗಿದೆ.
ಆನ್-ಫೀಲ್ಡ್ ಅಂಪೈರ್‌ಗಳಾದ ಅಲೆಕ್ಸ್ ವಾರ್ಫ್ ಮತ್ತು ಲುಬಾಬಾಲೊ ಗ್ಕುಮಾ, ಮೂರನೇ ಅಂಪೈರ್ ನಿತಿನ್ ಮೆನನ್ ಮತ್ತು ನಾಲ್ಕನೇ ಅಂಪೈರ್ ಅಲ್ಲಾವುದ್ದೀನ್ ಪಾಲೇಕರ್ ಅವರು ಆರೋಪ ಹೊರಿಸಿದ್ದರು. ಕ್ಲಾಸೆನ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಪಂದ್ಯ ಗೆಲ್ಲುವ ಮೂಲಕ ಪಾಕಿಸ್ಥಾನ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅಂತಿಮ ಪಂದ್ಯ ನಾಳೆ ನಡೆಯಲಿದೆ. ನ್ಯೂಲ್ಯಾಂಡ್ಸ್ ನಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ 81 ರನ್ನುಗಳಿಂದ ಜಯಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 49.5 ಓವರ್‌ಗಳಲ್ಲಿ 329 ರನ್ನುಗಳ ಬೃಹತ್ ಮೊತ್ತ ಪೇರಿಸಿದರೆ, ದಕ್ಷಿಣ ಆಫ್ರಿಕಾ 43.1 ಓವರ್‌ಗಳಲ್ಲಿ 248ಕ್ಕೆ ಆಲೌಟ್ ಆಯಿತು. ಪಾಕ್ ಪರ ಶಾಹೀನ್ ಅಫ್ರಿದಿ 47 ರನ್ನಿಗೆ 4 ವಿಕೆಟ್ ಉರುಳಿಸಿದರು.