ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿನಡೆಯುತ್ತಿರುವ ಮೂರನೇ ಆವೃತ್ತಿಯ SA20 ಲೀಗ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕನೊಬ್ಬ ಬರೋಬ್ಬರಿ 90 ಲಕ್ಷ ರೂ.ಗಳನ್ನು ಜೇಬಿಗಿಳಿಸಿದ್ದಾನೆ. ಅಚ್ಚರಿ ಆದರೂ ಇದು ಸತ್ಯ. ನ್ಯೂಜಿಲೆಂಡ್ ಆಟಗಾರ ಕೆನ್ ವಿಲಿಯಮ್ಸನ್ ಬಾರಿಸಿದ ಸಿಕ್ಸರ್ ಚೆಂಡನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕ್ಯಾಚ್ ಹಿಡಿದ ಕಾರಣಕ್ಕೆ ಈತನಿಗೆ ಈ ನಗದು ಪ್ರಶಸ್ತಿ ದೊರಕಿದೆ. ಡರ್ಬನ್ ಸೂಪರ್ ಜೈಂಟ್ಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ನಡುವೆ ಡರ್ಬನ್ ನಡುವಣ ಲೀಗ್ ಪಂದ್ಯ ಇದಾಗಿತ್ತು.
ಟೂರ್ನಿಯನ್ನು ಹೆಚ್ಚು ಪ್ರಚಾರ ಮಾಡುವ ನಿಟ್ಟಿನಲ್ಲಿ ಸಂಘಟಕರು ಕಳೆದ ಬಾರಿ ವಿದೇಶಿ ಪ್ರವಾಸದ ಪ್ಯಾಕೆಜ್ ನೀಡಿದ್ದರು. ಈ ಬಾರಿ ಕ್ಯಾಚ್ ಹಿಡಿದ ಪ್ರೇಕ್ಷಕರಿಗೆ ನಗದು ಮೊತ್ತವನ್ನು ಘೋಷಿಸಿದ್ದರು. ಅದರಂತೆ ಕ್ಯಾಚ್ ಪಡೆದ ಪ್ರತಿಯೊಬ್ಬ ಪ್ರೇಕ್ಷಕನಿಗೆ ದಕ್ಷಿಣ ಆಫ್ರಿಕನ್ ಕರೆನ್ಸಿ ಎರಡು ಮಿಲಿಯನ್ ರಾಂಡ್‌ಗಳನ್ನು(ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 90 ಲಕ್ಷ ರೂ.) ನೀಡಲಾಗುತ್ತದೆ.
ಕ್ಯಾಚ್ ಹಿಡಿದ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಪಕ್ಕದಲ್ಲಿದ್ದ ಇತರ ಕ್ರೀಡಾಭಿಮಾನಿಗಳು ಸಹ ಆ ವ್ಯಕ್ತಿಯನ್ನು ಅಭಿನಂದಿಸಿದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದ ಮಾರ್ಕ್ ನಿಕೋಲಸ್, ಇದೊಂದು ಅದ್ಭುತ ಕ್ಯಾಚ್. ಒಂದೇ ಕೈಯಲ್ಲಿ ಹಿಡಿದ ಈ ಕ್ಯಾಚ್ ನಿಜಕ್ಕೂ ಅದ್ಭುತ. ಈ ಕ್ಯಾಚ್‌ಗೆ ಕೇವಲ ಎರಡು ಮಿಲಿಯನ್ ರಾಂಡ್‌ಗಳು ಸಾಲದು. ಪಂದ್ಯದ ಗೆಲುವಿನ ಅರ್ಧ ಮೊತ್ತವನ್ನು ನೀಡಬೇಕು ಎಂದು ವರ್ಣಿಸಿದರು. ಸದ್ಯ ಈ ಕ್ಯಾಚ್‌ನ ವಿಡಿಯೊ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡರ್ಬನ್ ಸೂಪರ್ ಜೈಂಟ್ಸ್, ಕೆನ್ ವಿಲಿಯಮ್ಸನ್ ಅವರ ಅರ್ಧಶತಕದ ನೆರವಿನಿಂದ ರೋಚಕ ಪಂದ್ಯದಲ್ಲಿ ಎರಡು ರನ್‌ಗಳಿಂದ ಗೆದ್ದಿತು.