ಮುಂಬಯಿ: ನ್ಯೂಜಿಲೆಂಡ್(India vs New Zealand) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಯುವ ಆಟಗಾರರಾದ ರಚಿನ್ ರವೀಂದ್ರ(Rachin Ravindra) ಹಾಗೂ ಸರ್ಫರಾಜ್ ಖಾನ್(Sarfaraz Khan) ಅವರನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(Sachin Tendulkar) ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಟ್ವಿಟರ್ ಎಕ್ಸ್ ಖಾತೆಯಲ್ಲಿ ಯುವ ಆಟಗಾರರ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಸಚಿನ್ ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್ ತಮ್ಮ ಪೂರ್ವಜರ ನೆಲದೊಂದಿಗೆ ಸಂಬಂಧ ಮೂಡಿಸುತ್ತದೆ, ಇದಕ್ಕೆ ರಚಿನ್ ರವೀಂದ್ರ ತಾಜಾ ಉದಾಹರಣೆ ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ. ರಚಿನ್ ಅವರು ಬೆಂಗಳೂರು ಮೂಲದವರಾಗಿರುವ ಕಾರಣ ಸಚಿನ್ ಈ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ಕ್ರಿಕೆಟ್ ತಮ್ಮ ಪೂರ್ವಜರ ನೆಲದೊಂದಿಗೆ ಸಂಬಂಧ ಮೂಡಿಸುತ್ತದೆ. ಬೆಂಗಳೂರಿನೊಂದಿಗೆ ರಚಿನ್ ರವೀಂದ್ರ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರ ಕುಟುಂಬದ ಹಿರಿಯರು ಇಲ್ಲೇ ನೆಲೆಸಿದ್ದಾರೆ. ಆತನ ಹೆಸರಿನೊಂದಿಗೆ ಮತ್ತೊಂದು ಶತಕ ಸೇರಿಕೊಂಡಿದೆ. ಸರ್ಫರಾಜ್ ಖಾನ್ ಅವರು ತಮ್ಮ ಚೊಚ್ಚಲ ಶತಕ ಸಂಭ್ರಮದಲ್ಲಿದ್ದಾರೆ. ಟೀಮ್ ಇಂಡಿಯಾ ಆತನಿಂದ ಈ ರೀತಿಯ ಆಟ ನಿರೀಕ್ಷಿಸಿತ್ತು. ಇಬ್ಬರು ಯುವ ಪ್ರತಿಭೆಗಳು ಶತಕ ಸಿಡಿಸುವ ಮೂಲಕ ತಮ್ಮ ತಂಡದಲ್ಲಿ ಉತ್ಸಾಹ ಮೂಡಿಸಿದ್ದಾರೆ” ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ IND vs NZ: ಗಾಯದ ಮಧ್ಯೆಯೂ ಬ್ಯಾಟಿಂಗ್ ನಡೆಸಿ ಧೋನಿ ದಾಖಲೆ ಮುರಿದ ಪಂತ್
ರಚಿನ್ ಅವರು ಶತಕ ಬಾರಿಸುವ ಮೂಲಕ 2012 ರ ನಂತರ ಭಾರತದಲ್ಲಿ ಶತಕ ಬಾರಿಸಿದ ಮೊದಲ ನ್ಯೂಜಿಲೆಂಡ್ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ ರಚಿನ್ ಅಂತಿಮವಾಗಿ 157 ಎಸೆತಗಳಿಂದ 13 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 134 ರನ್ ಗಳಿಸಿದ್ದರು.
ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಅವರು ಸಚಿನ್ ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸಂಯೋಜಿಸುವ ಮೂಲಕ ತಮ್ಮ ಮಗನಿಗೆ ಹೆಸರಿಟ್ಟಿದ್ದಾರೆ. ರಾಹುಲ್ ಅವರಿಂದ “ರಾ” ಮತ್ತು ಸಚಿನ್ ಅವರಿಂದ “ಚಿನ್” ತೆಗೆದುಕೊಂಡು ಎರಡನ್ನೂ ಸಂಯೋಜಿಸಿ ರಚಿನ್ ಎಂದು ಹೆಸರಿಟ್ಟರು.
ನಾಲ್ಕನೇ ದಿನದಾಟದಲ್ಲಿ ಸರ್ಫರಾಜ್ ಖಾನ್ ಹಾಗೂ ರಿಷಭ್ ಪಂತ್ ನಾಲ್ಕನೇ ವಿಕೆಟ್ಗೆ 177 ರನ್ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರ್ಫರಾಜ್ ಖಾನ್ 195 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 150 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.