Sunday, 15th December 2024

ವಿಂಡೀಸ್​ ವಿರುದ್ಧ ಟೆಸ್ಟ್: ವಿರಾಟ್‌ಗೆ 500ನೇ ಅಂತಾರಾಷ್ಟ್ರೀಯ ಪಂದ್ಯ

ಟ್ರಿನಿಡಾಡ್: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ಗುರುವಾರ ಸಂಜೆ 2ನೇ ಟೆಸ್ಟ್​ ಪಂದ್ಯವು ವಿರಾಟ್​ ಕೊಹ್ಲಿ ಪಾಲಿಗೆ ವೃತ್ತಿ ಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದೆ.

ಈ ಸಾಧನೆ ಮಾಡಿದ ವಿಶ್ವದ 10ನೇ ಮತ್ತು ಭಾರತದ 4ನೇ ಕ್ರಿಕೆಟರ್​ ಎನಿಸಿಕೊಳ್ಳಲಿದ್ದಾರೆ. ​ಕೊಹ್ಲಿ ಈವರೆಗೂ ಕ್ರಿಕೆಟ್‌ ಎಲ್ಲ ಮೂರು ಮಾದರಿಯಲ್ಲಿ 499 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕೊಹ್ಲಿ 15 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದಲ್ಲಿ ದಾಖಲೆಯ ಪಂದ್ಯ ಕ್ಕಾಗಿ ಕ್ರೀಡಾಂಗಣಕ್ಕಿಳಿಯಲಿದ್ದಾರೆ. ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ರಾಹುಲ್ ದ್ರಾವಿಡ್ ನಂತರ ಐನೂರನೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಾಲ್ಕನೇ ಭಾರತೀಯ ಆಟಗಾರ ಕೊಹ್ಲಿ.

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.

ಇವರು ಒಟ್ಟು 664 ಪಂದ್ಯಗಳನ್ನು ಆಡಿದ್ದಾರೆ. ನಂತರ ಶ್ರೀಲಂಕಾದ ಮಹೇಲಾ ಜಯವರ್ಧನೆ 652 ಪಂದ್ಯಗಳನ್ನಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 538 ಮತ್ತು ರಾಹುಲ್ ದ್ರಾವಿಡ್ 509 ಪಂದ್ಯಗಳನ್ನಾಡಿದ್ದಾರೆ. ಇದೀಗ ಕೊಹ್ಲಿ ಈ ಕ್ಲಬ್​ಗೆ ಸೇರ್ಪಡೆಗೊಳ್ಳಲಿದ್ದಾರೆ.

ಸಚಿನ್ ತೆಂಡೂಲ್ಕರ್ 499 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 569 ಇನ್ನಿಂಗ್ಸ್‌ಗಳನ್ನು ಆಡಿ, 48.51 ಸರಾಸರಿಯೊಂದಿಗೆ 24,839 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 68.71 ಇದ್ದು ಅತ್ಯುತ್ತಮ ಸ್ಕೋರ್ 248 ರನ್ ಆಗಿದೆ. ವಿರಾಟ್ ಕೊಹ್ಲಿ 499 ಪಂದ್ಯಗಳಲ್ಲಿ 558 ಇನ್ನಿಂಗ್ಸ್ ಆಡಿ, 53.48 ಸರಾಸರಿಯೊಂದಿಗೆ 25,461 ರನ್​ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 79.11 ಇದ್ದು ಅತ್ಯುತ್ತಮ ಸ್ಕೋರ್ 254 ರನ್ ಆಗಿದೆ.

ಸಚಿನ್ ತೆಂಡೂಲ್ಕರ್ 499 ಪಂದ್ಯಗಳ ಪೈಕಿ 75 ಶತಕ ಮತ್ತು 114 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಹಂತದಲ್ಲಿ ಕೊಹ್ಲಿ ಕೂಡ 75 ಶತಕಗಳನ್ನು ದಾಖಲಿಸಿದ್ದು, 131 ಅರ್ಧಶತಕಗಳನ್ನು ಗಳಿಸಿ ಸಚಿನ್‌ಗಿಂತ ಮುಂದಿದ್ದಾರೆ.