ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಮನು ಭಾಕರ್(Manu Bhaker) ಅವರನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿಯಿಂದ ಹೊರಗಿಟ್ಟ ವಿಚಾರದಲ್ಲಿ ಮನು ಅವರ ತಂದೆ ರಾಮ್ ಕಿಶನ್ ಸರಣಿ ಹೇಳಿಕೆಗಳ ಮೂಲಕ ಭಾರೀ ಆಕ್ರೋಶ ಹೊರ ಹಾಕಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ರಾಮ್ ಕಿಶನ್ ಭಾಕರ್, ನನ್ನ ಮಗಳನ್ನು ಶೂಟಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ವಿಷಾದಿಸುತ್ತೇನೆ. ಬದಲಿಗೆ ಅವಳನ್ನು ಕ್ರಿಕೆಟ್ ಆಟಗಾರ್ತಿಯನ್ನಾಗಿ ಮಾಡಬೇಕಿತ್ತು. ಆಗ ಎಲ್ಲಾ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಅವಳಿಗೆ ಬರುತ್ತಿದ್ದವು. ಅವಳು ಒಂದೇ ಆವೃತ್ತಿಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದಳು, ಯಾರೂ ಅದನ್ನು ಮಾಡಿಲ್ಲ. ಅವಳು ದೇಶಕ್ಕಾಗಿ ಇನ್ನೇನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ, ಸರ್ಕಾರವು ಅವಳ ಪ್ರಯತ್ನಗಳನ್ನು ಗುರುತಿಸಬೇಕು ಎಂದು ಕ್ರೀಡಾ ಸಚಿವಾಲಯದ ವಿರುದ್ಧ ರಾಮ್ ಕಿಶನ್ ಗುಡುಗಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಾಮ ಸುಬ್ರಮಮ್ ನೇತೃತ್ವದಲ್ಲಿರುವ 12 ಮಂದಿಯನ್ನೊಳಗೊಂಡ ರಾಷ್ಟ್ರೀಯ ಕ್ರೀಡಾ ದಿನ ಸಮಿತಿಯ ಸದಸ್ಯರು ಖೇಲ್ ರತ್ನಕ್ಕೆ ಭಾಕರ್ ಹೆಸರನ್ನು ಶಿಫಾರಸು ಮಾಡಿಲ್ಲ ಎನ್ನಲಾಗಿದೆ.
ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಕ್ಸ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಅವರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಸದ್ಯ ವರದಿಯಾಗಿದೆ. ಆದರೆ ಪ್ರಶಸ್ತಿ ಪಟ್ಟಿ ಇನ್ನೂ ಅಂತಿಮವಾಗಿಲ್ಲ ಆದರೂ ಕೂಡ ಮನು ಭಾಕರ್ ತಂದೆ ಈ ರೀತಿ ಹೇಳಿಕೆ ನೀಡುತ್ತಿರುವುದು ಭಾರೀ ವಿವಾದವೊಂದನ್ನು ತಮ್ಮ ಮೇಲೆ ಎಳೆದುಕೊಳ್ಳುವಂತೆ ಕಾಣಿಸುತ್ತಿದೆ. ತಂದೆಯ ಈ ಹೇಳಿಕೆಯಿಂದ ಮನು ಅವರ ಮೇಲಿದ್ದ ಗೌರವಕ್ಕೂ ದಕ್ಕೆಯಾಗುವ ಸಾಧ್ಯತೆ ಇದೆ. ಆಕೆ ದೇಶಕ್ಕಿಂತ ಹೆಸರು ಮತ್ತು ಪ್ರಶಸ್ತಿಗಾಗಿ ಪದಕ ಗೆದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರಬಹುದು.
ಮನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಇನ್ನೊಂದು ಮಿಶ್ರ 10m ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಪದಕ ಜಯಿಸಿದ್ದರು. ಮನು ಭಾಕರ್ 2020 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದರು.