ದುಬೈ: ಕರ್ನಾಟಕದ ಯುವ ಆಟಗಾರ್ತಿ, 22 ವರ್ಷದ ಶ್ರೇಯಾಂಕಾ ಪಾಟೀಲ್(Shreyanka Patil) ಅವರ ಹೆಸರನ್ನು ಐಸಿಸಿಯ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ(ICC Women’s Emerging Cricketer) ನಾಮನಿರ್ದೇಶನ ಮಾಡಲಾಗಿದೆ. ಇವರ ಜತೆ ದಕ್ಷಿಣ ಆಫ್ರಿಕಾದ ಆ್ಯನೇರಿ ಡರ್ಕ್‌ಸನ್, ಸ್ಕಾಟ್ಲೆಂಡ್‌ನ ಸಾಸ್ಕಿಯಾ ಹೋರ್ಲಿ ಮತ್ತು ಐರ್ಲೆಂಡ್‌ನ ಫ್ರೆಯಾ ಸರ್ಜೆಂಟ್ ಕೂಡ ಸ್ಪರ್ಧೆಯಲ್ಲಿದ್ದಾರೆ.
2023ರಲ್ಲಿ ನಡೆದ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಶ್ರೇಯದೊಂದಿಗೆ ಶ್ರೇಯಾಂಕಾ ಅವರು ಇತಿಹಾಸ ಬರೆದಿದ್ದರು. ಎಲ್ಲಾ ಬಗೆಯ ಕ್ರಿಕೆಟ್ ಮಾದರಿಗಳಲ್ಲೂ ಶ್ರೇಯಾಂಕಾ ಅವರ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಐಸಿಸಿ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಸದ್ಯ ಕಳಪೆ ಫಾರ್ಮ್‌ನಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಇದುವರೆಗೆ ಭಾರತ ಪರ 3 ಏಕದಿನ, 16 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 5, ಟಿ20 ಯಲ್ಲಿ 20 ವಿಕೇಟ್ ಕೆಡವಿದ್ದಾರೆ. ಈ ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಾಂಕಾ ಅವರು, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಸರಣಿ, ಮಹಿಳಾ ಟಿ20 ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.