Wednesday, 8th January 2025

Shubman Gill: ʻಶುಭಮನ್‌ ಗಿಲ್‌ಗೆ ಏಕೆ ಇಷ್ಟೊಂದು ಅವಕಾಶ?-ಬಿಸಿಸಿಐಗೆ ಕೆ ಶ್ರೀಕಾಂತ್‌ ಪ್ರಶ್ನೆ!

Shubman Gill is highly overrated, India should pick Gaikwad or Sudharsan: K Srikkanth

ನವದೆಹಲಿ: ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ (Shubman Gill) ವಿದೇಶಿ ನೆಲದಲ್ಲಿ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದರೂ ಅವರಿಗೆ ಭಾರತ ತಂಡದಲ್ಲಿ ಹೆಚ್ಚು-ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ ಎಂದು ಬಿಸಿಸಿಐ ಮಾಜಿ ಸೆಲೆಕ್ಟರ್‌ ಹಾಗೂ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಆರೋಪ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಗಿದಿದ್ದ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್‌ ಬಿಟ್ಟರೆ ಇನ್ನುಳಿದ ಭಾರತೀಯ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿಬಂದಿರಲಿಲ್ಲ. ಡೆಬ್ಯೂಂಟಂಟ್‌ ನಿತೀಶ್‌ ಕುಮಾರ್‌ ರೆಡ್ಡಿ, ಕೆಎಲ್‌ ರಾಹುಲ್‌ ಹಾಗೂ ರಿಷಭ್‌ ಪಂತ್‌ ಅವರು ಸ್ವಲ್ಪ ಭರವಸೆ ನೀಡಿದ್ದರು. ಆದರೆ, ಅವರು ತಂಡಕ್ಕೆ ಅಗತ್ಯವಿದ್ದ ಸಂದರ್ಭಗಳಲ್ಲಿ ಪುಟಿದೇಳುವಲ್ಲಿ ವಿಫಲರಾಗಿದ್ದರು.

2020-21ರಸಾಲಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶುಭಮನ್‌ ಗಿಲ್‌, ಏಷ್ಯಾ ನೆಲದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದರೂ ಅವರು ವಿದೇಶಿ ನೆಲದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಆದರೆ, ಗಿಲ್‌ ಅವರನ್ನು ಭವಿಷ್ಯದ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸತತ ಅವಕಾಶಗಳನ್ನು ನೀಡಲಾಗುತ್ತಿದೆ. ಆದರೆ, ಅವರಿ ವಿದೇಶಿ ಟೆಸ್ಟ್‌ ಸರಣಿಗಳಲ್ಲಿ ಆಡಿದ 18 ಇನಿಂಗ್ಸ್‌ಗಳಿಂದ 17.64ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಇನ್ನು ಇವರು ಕಳೆದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಕ್ರಮವಾಗಿ 13, 20, 1, 28 ಹಾಗೂ 31 ರನ್‌ಗಳಿಗೆ ಸೀಮಿತರಾಗಿದ್ದಾರೆ.

ಶುಭಮನ್‌ ಗಿಲ್‌ ಅವರನ್ನು ಅತಿಯಾಗಿ ಅಂದಾಜಿಸಲಾಗಿದೆ: ಕೆ ಶ್ರೀಕಾಂತ್‌

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಕೆ ಶ್ರೀಕಾಂತ್‌, “ಶುಭಮನ್‌ ಗಿಲ್‌ ಅವರು ಅತಿಯಾಗಿ ಅಂದಾಜಿಸಲಾಗಿದೆ ಎಂದು ನಾನು ನಿರಂತರವಾಗಿ ಹೇಳುತ್ತಾ ಬಂದಿದ್ದೇನೆ. ಆದರೆ, ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಹೌದು ಅವರು ಅತಿಯಾಗಿ ಅಂದಾಜಿಸಿದ ಆಟಗಾರ,” ಎಂದು ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಶುಭಮನ್‌ ಗಿಲ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಆದರೆ, ಸೂರ್ಯಕುಮಾರ್‌ ಯಾದವ್‌ ಅವರಂಥ ಆಟಗಾರರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿಲ್ಲ ಎಂದು ಶ್ರೀಕಾಂತ್‌ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ್‌ ಟೆಸ್ಟ್‌ ಬಳಿಕ ಸೂರ್ದಯಕುಮಾರ್‌ ಯಾದವ್‌ಗೆ ಭಾರತ ಟೆಸ್ಟ್‌ ತಂಡದಲ್ಲಿ ಅವಕಾಶ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಸೂರ್ಯಕುಮಾರ್‌ಗೆ ಉತ್ತಮ ಸಾಮರ್ಥ್ಯವಿದೆ

“ಶುಭಮನ್‌ ಗಿಲ್‌ಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಆದರೆ, ಸೂರ್ಯಕುಮಾರ್‌ ಯಾದವ್‌ ಅವರಂಥ ಆಟಗಾರರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್‌ ಉತ್ತಮ ಆರಂಭ ಪಡೆದಿಲ್ಲ, ಆದರೆ ಅವರಲ್ಲಿ ಉತ್ತಮ ಸಾಮರ್ಥ್ಯ ಹಾಗೂ ತಂತ್ರಗಾರಿಕೆ ಇದೆ. ಸೆಲೆಕ್ಟರ್‌ಗಳು ಅವರನ್ನು ಕೇವಲ ವೈಟ್‌ಬಾಲ್‌ಗೆ ಸೀಮಿತಗೊಳಿಸಿದ್ದಾರೆ.

ಗಾಯಕ್ವಾಡ್‌, ಸುದರ್ಶನ್‌ಗೆ ಅವಕಾಶ ನೀಡಬೇಕು

“ಮತ್ತೊಂದು ಕಡೆ ಋತುರಾಜ್‌ ಗಾಯಕ್ವಾಡ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಆದರೆ, ಅವರನ್ನು ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡಿಲ್ಲ. ಎ ಪ್ರವಾಸದಲ್ಲಿಯೂ ಸಾಯಿ ಸುದರ್ಶನ್‌ ಕೂಡ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಇಂಥಾ ಆಟಗಾರರನ್ನು ಭಾರತ ತಂಡದಲ್ಲಿ ಆಡಿಸಬೇಕು. ಆದರೆ, ಇದರ ಬದಲು ಆಯ್ಕೆದಾರರು ಗಿಲ್‌ ಅವರಂಥ ಆಟಗಾರರನ್ನು ನೆಚ್ಚಿಕೊಂಡಿದೆ,” ಎಂದು ಶ್ರೀಕಾಂತ್‌ ಆರೋಪ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿ: ಆಯ್ಕೆ ಸಮಿತಿಯಿಂದ ಪ್ರಾದೇಶಿಕ ತಾರತಮ್ಯ; ಮಾಜಿ ಆಟಗಾರನ ಗಂಭೀರ ಆರೋಪ

Leave a Reply

Your email address will not be published. Required fields are marked *