ಮೆಲ್ಬರ್ನ್: ಎರಡನೇ ಟೆಸ್ಟ್‌ನಲ್ಲಿ ನಿಧಾನ ಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯದ ಸಂಭಾವನೆ ಯಲ್ಲಿ ಶೇ 40ರಷ್ಟು ದಂಡ ವಿಧಿಸಿರುವುದಾಗಿ ಐಸಿಸಿ ಪ್ರಕಟಿಸಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಂಗಳವಾರ ಟೀಂ ಇಂಡಿಯಾ ಎಂಟು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ನಿಧಾನ ಗತಿಯ ಬೌಲಿಂಗ್ ನಡೆಸಿರುವುದಕ್ಕೆ ದಂಡ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ಗಳಲ್ಲಿ 4 ಪಾಯಿಂಟ್ ಕಡಿತ ಗೊಳಿಸಲಾಗಿದೆ.
ಟಿಮ್ ನೇತೃತ್ವದ ಆಸಿಸ್ ತಂಡ ನಿಗದಿತ ಸಮಯದಲ್ಲಿ ನಡೆಸಬೇಕಾದ ಓವರ್‌ಗಳಿಗಿಂತ ಎರಡು ಓವರ್‌ಗಳಷ್ಟು ಕಡಿಮೆ ದಾಖ ಲಾಗಿರುವುದನ್ನು ಗಮನಿಸಿ ಎಲೈಟ್ ಪ್ಯಾನಲ್‌ನ ಡೇವಿಡ್ ಬೂನ್ ದಂಡ ವಿಧಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರೈಸದಿದ್ದರೆ, ಪ್ರತಿ ಓವರ್‌ಗೆ ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇ 20ರಷ್ಟು ದಂಡ ವಿಧಿಸಬಹುದಾಗಿರುತ್ತದೆ. ಪ್ರತಿ ಓವರ್ ನಿಧಾನ ಗತಿಗೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ಟ್‌ನಲ್ಲಿ 2 ಪಾಯಿಂಟ್‌ಗಳನ್ನು ಕಡಿತ ಗೊಳಿಸಬಹುದಾಗುತ್ತದೆ. ಹೀಗಾಗಿ, ಆಸ್ಟ್ರೇಲಿಯಾ ತಂಡಕ್ಕೆ 4 ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗಿದೆ ಹಾಗೂ ಸಂಭಾವನೆಯ ಶೇ 40ರಷ್ಟು ದಂಡ ವಿಧಿಸಲಾಗಿದೆ.