ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT 2024) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಗೋವಾ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಅಂತ್ಯವಾಗಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು. ಆದರೆ, ಮುಂಬೈ ತಂಡದ ವಿರುದ್ದವೇ ಅರ್ಜುನ್ ತೆಂಡೂಲ್ಕರ್ ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ ಬರೋಬ್ಬರಿ 48 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಕೇವಲ 9 ರನ್ ಗಳಿಸಿದ್ದರು.
ಇದಕ್ಕೂ ಮುನ್ನ ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ಮರಿ ತೆಂಡೂಲ್ಕರ್ ಅವರು ಬೌಲ್ ಮಾಡಿದ್ದ ಕೇವಲ ಮೂರು ಓವರ್‌ಗಳಿಗೆ ಕೇವಲ 19 ರನ್‌ಗಳನ್ನು ನೀಡಿದ್ದರು. ಆದರೆ, ಈ ಪಂದ್ಯದಲ್ಲಿ ಬ್ಯಾಟ್ ಮಾಡಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಅಂತಿಮವಾಗಿ ಈ ಪಂದ್ಯದಲ್ಲಿ ಸರ್ವೀಸಸ್ ನೀಡಿದ್ದ 188 ರನ್‌ಗಳನ್ನು ಚೇಸ್ ಮಾಡುವಲ್ಲಿ ಗೋವಾ ತಂಡ ವಿಫಲವಾಗಿತ್ತು.
ಇನ್ನು ಆಂಧ್ರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಬೌಲ್ ಮಾಡಿದ್ದ 3.4 ಓವರ್‌ಗಳಿಗೆ 36 ರನ್‌ಗಳನ್ನು ನೀಡಿದ್ದರು. ಈ ಪಂದ್ಯದಲ್ಲಿ ಗೋವಾ ನೀಡಿದ್ದ 155 ರನ್‌ಗಳ ಗುರಿಯನ್ನು ಆಂಧ್ರ ಪ್ರದೇಶ ತಂಡ ಕೇವಲ 15.4 ಓವರ್‌ಗಳಿಗೆ ಚೇಸ್ ಮಾಡಿತ್ತು. ಕೇರಳ ಹಾಗೂ ಮಹಾರಾಷ್ಟ್ರ ವಿರುದ್ಧದ ಮುಂದಿನ ಎರಡು ಪಂದ್ಯಗಳ ಗೋವಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಸೋಲುವ ಮೂಲಕ ಗೋವಾ ತಂಡ ಗ್ರೂಪ್ ಇ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.
ಅರ್ಜುನ್ ತೆಂಡೂಲ್ಕರ್ ಗೋವಾ ಸೇರಿದ್ದೇಗೆ?
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು 2022-23ರ ಸಾಲಿನ ದೇಶಿ ಕ್ರಿಕೆಟ್ ಋತುವಿನ ವೇಳೆ ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದರು. ತಮ್ಮ ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ದ ಅರ್ಜುನ್ ತೆಂಡೂಲ್ಕರ್ ಅವರು ಶತಕ ಸಿಡಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಅರ್ಜುನ್ ಅವರಿಂದ ಶತಕ ಸಿಡಿಸಲು ಸಾಧ್ಯವಾಗಿಲ್ಲ. ಇಲ್ಲಿಯತನಕ ಮರಿ ತೆಂಡೂಲ್ಕರ್ ಅವರು ಆಡಿದ 17 ಪ್ರಥಮ ದರ್ಜೆ ಪಂದ್ಯಗಳಿಂದ 37ವಿಕೆಟ್‌ಗಳು ಹಾಗೂ 532 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಲಿಸ್ಟ್ ಎ ನಲ್ಲಿ ಅವರು ಆಡಿದ 15 ಪಂದ್ಯಗಳಿಂದ 62 ಮತ್ತು 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2021ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ
ಅರ್ಜುನ್ ತೆಂಡೂಲ್ಕರ್ ಅವರು 2021ರಲ್ಲಿ ಮುಂಬೈ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಟಿ20 ಕ್ರಿಕೆಟ್‌ನಲ್ಲಿ 27 ವಿಕೆಟ್‌ಗಳು ಹಾಗೂ 119 ರನ್‌ಗಳನ್ನು ಗಳಿಸಿದ್ದಾರೆ. ಗೋವಾ ಹಾಗೂ ಮುಂಬೈ ಜೊತೆಗೆ ಅರ್ಜುನ್ ತೆಂಡೂಲ್ಕರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡ ಪ್ರತಿನಿಧಿಸಿದ್ದಾರೆ. ಅವರು ಇಲ್ಲಿಯವರೆಗೂ ಐದು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
ಈ ಸುದ್ದಿಯನ್ನು ಓದಿ: IPL 2025: ಮೆಗಾ ಹರಾಜಿಗೂ ಮುನ್ನ ನಿರಾಶೆ ಮೂಡಿಸಿದ ಅರ್ಜುನ್ ತೆಂಡೂಲ್ಕರ್!