Monday, 13th January 2025

Champions Trophy: ದಕ್ಷಿಣ ಆಫ್ರಿಕಾ ತಂಡ ಪ್ರಕಟ; ತಂಡಕ್ಕೆ ಮರಳಿದ ಪ್ರಮುಖ ವೇಗಿಗಳು

ಜೊಹಾನ್ಸ್‌ಬರ್ಗ್‌: ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಹೈಬ್ರಿಡ್‌ ಮಾದರಿಯ ಚಾಂಪಿಯನ್ಸ್‌ ಟ್ರೋಫಿಗೆ(Champions Trophy) ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. 15 ಸದಸ್ಯರ ತಂಡವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಸೋಮವಾರ(ಜ.13) ಪ್ರಕಟಿಸಿತು. ಟೆಂಬ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದ ವಿಶ್ರಾಂತಿ ಪಡೆದಿದ್ದ ವೇಗಿಗಳಾದ ಲುಂಗಿ ಎನ್‌ಗಿಡಿ ಮತ್ತು ಅನ್ರಿಚ್ ನಾರ್ಜೆ ಮತ್ತೆ ತಂಡಕ್ಕೆ ಮರಳಿದ್ದಾರೆ.

ಕಳೆದ ತಿಂಗಳು ನಾರ್ಜೆ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಅವರನ್ನು ಪಾಕಿಸ್ತಾನದ ವಿರುದ್ಧದ ಸರಣಿಯಿಂದ ಹೊರಗಿಡಲಾಗಿತ್ತು. ನವೆಂಬರ್‌ನಲ್ಲಿ ತೊಡೆಸಂದು ಗಾಯಕ್ಕೆ ತುತ್ತಾಗಿದ್ದ ಎನ್‌ಗಿಡಿ ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧದ ಸರಣಿಯನ್ನು ಕಳೆದುಕೊಂಡಿದ್ದರು. ಇದೀಗ ಉಭಯ ವೇಗಿಗಳು ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಆದರೆ ಕಳೆದ ವರ್ಷ ಡರ್ಬನ್‌ನಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತೊಡೆಸಂದು ಗಾಯಕ್ಕೆ ತುತ್ತಾದ ಆಲ್‌ರೌಂಡರ್‌ ಜೆರಾಲ್ಡ್ ಕೋಟ್ಜಿ ಅವರನ್ನು ಕೈಬಿಡಲಾಗಿದೆ.

2023 ರ ಏಕದಿನ ವಿಶ್ವಕಪ್‌ನ ಸೆಮಿಫೈನಲಿಸ್ಟ್‌ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ಸ್ ಟ್ರೋಫಿಯ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಫೆಬ್ರವರಿ 21 ರಂದು ಕರಾಚಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ತಂಡದಲ್ಲಿ ಅನುಭವಿ ಸ್ಪಿನ್ನರ್‌ಗಳಾಗಿ ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಕಾಣಿಸಿಕೊಂಡಿದ್ದಾರೆ. ಐಡೆನ್ ಮಾರ್ಕ್ರಾಮ್ ಅರೆಕಾಲಿಕ ಆಫ್-ಸ್ಪಿನ್ನರ್‌ ಆಗಿ ನೆರವು ನೀಡಲಿದ್ದಾರೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಫ್‌ ಫೈನಲ್‌ ಪ್ರವೇಶಿಸಿದ ಹುರುಪಿನಲ್ಲೇ ಈ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕಣಕ್ಕಿಳಿಯಲಿದೆ.

8 ತಂಡಗಳ ಪೈಕಿ 6 ತಂಡಗಳು ಪ್ರಕಟಗೊಂಡಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಮೂಲಗಳ ಪ್ರಕಾರ ಭಾರತ ತನ್ನ ತಂಡವನ್ನು ಜ.18 ರಂದು ಪ್ರಕಟಿಸುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ತಂಡ

ಟೆಂಬಾ ಬವುಮಾ (ನಾಯಕ), ಟೋನಿ ಡಿ ಜೊರ್ಜಿ, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಜೆ, ಕಗಿಸೊ ರಬಾಡಾ, ರಯಾನ್ ರಿಕೆಲ್ಟನ್, ತಬ್ರೈಜ್ ಶಮ್ಸಿ, ಡುಸ್ಸೆನ್ ಸ್ಟಬ್ವಾನ್, ಟ್ರಿಸ್ಟಾನ್ ಸ್ಟಬ್ಸ್

Leave a Reply

Your email address will not be published. Required fields are marked *