ಸೆಂಚುರಿಯನ್: ಮುಂದಿನ ವರ್ಷ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ(WTC 2025 final) ಮೊದಲ ತಂಡವಾಗಿ ದಕ್ಷಿಣ ಆಫ್ರಿಕಾ(South Africa) ಪ್ರವೇಶ ಪಡೆದಿದೆ. ತವರಿನಲ್ಲಿ ಪಾಕಿಸ್ತಾನ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 2 ವಿಕೆಟ್‌ಗಳ ಗೆಲುವು ಸಾಧಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿತು. ಇನ್ನೊಂದು ಸ್ಥಾನಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೀವ್ರ ಪೈಪೋಟಿ ಏರ್ಪಟಿದೆ. ಫೈನಲ್ ಪಂದ್ಯ ಜೂನ್ 11 ರಿಂದ 15 ರ ತನಕ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿದೆ.
ದಕ್ಷಿಣ ಆಫ್ರಿಕಾ 66.67 ಗೆಲುವಿನ ಶೇಕಡಾವಾರು ಅಂಕದೊಂದಿಗೆ ಫೈನಲ್ ಪ್ರವೇಶಿಸಿತು. 58.89 ಅಂಕ ಹೊಂದಿರುವ ಆಸೀಸ್ ಸದ್ಯ ದ್ವಿತೀಯ ಸ್ಥಾನದಲ್ಲಿದ್ದರೆ, ಭಾರತ 55.89 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತ ಈ ಹಿಂದಿನ ಎರಡು ಆವೃತ್ತಿಯಲ್ಲಿಯೂ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಭಾರತಕ್ಕೆ ಫೈನಲ್ ಟಿಕೆಟ್ ಅನುಮಾನ ಎನ್ನುವಂತಿದೆ. ಆಸೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಸೋತರೆ ಭಾರತ ಫೈನಲ್ ಕನಸು ಬಹುತೇಕ ಕಮರಿ ಹೋಗಲಿದೆ. ಒಂದೊಮೆ ಶ್ರೀಲಂಕಾ ತಂಡ ಆಸೀಸ್ ವಿರುದ್ಧದ 2 ಪಂದ್ಯಗಳನ್ನು ಗೆದ್ದರೆ ಆಗ ಭಾರತಕ್ಕೆ ಅವಕಾಶವೊಂದು ಸಿಗುವ ಸಾಧ್ಯತೆ ಇದೆ.
ಭಾನುವಾರ ಮುಕ್ತಾಯ ಕಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ 2 ವಿಕೆಟ್‌ಗಳ ಗೆಲುವು ಸಾಧಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಿತು. ಇನ್ನೊಂದು ಪಂದ್ಯ ಸೋತರೂ ಕೂಡ ಹರಿಣ ಪಡೆಗೆ ಯಾವುದೇ ನಷ್ಟ ಸಂಭವಿಸದು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 211 ರನ್‌ಗೆ ಸರ್ವಪತನ ಕಂಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಐಡೆನ್ ಮಾರ್ಕ್ರಮ್(89) ಮತ್ತು ಯುವ ಆಟಗಾರ ಕಾರ್ಬಿನ್ ಬಾಷ್(81*) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ 301 ರನ್ ಗಳಿಸಿ 90 ಲೀಡ್ ಪಡೆದುಕೊಂಡಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಪಾಕ್ 237 ರನ್ ಬಾರಿಸಿತು. 148 ರನ್‌ಗಳ ಗೆಲುವಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ನಾಟಕೀಯ ಕುಸಿತ ಕಂಡು ಸೋಲಿನ ಭೀತಿಗೆ ಸಿಲುಕಿ ಕೊನೆಗೆ ವೇಗಿ ಕಾಗಿಸೊ ರಬಾಡ ಅವರ ಜವಾಬ್ದಾರಿಯುವ ಬ್ಯಾಟಿಂಗ್ ನೆರವಿನಿಂದ ಗೆಲುವಿನ ದಡ ಸೇರಿತು. ರಬಾಡ ಅಜೇಯ 31 ರನ್ ಬಾರಿಸಿದರು. ಉಳಿದಂತೆ ಟೆಂಬ ಬವುಮಾ 40 ರನ್ ಬಾರಿಸಿದರು.