ಕೇಪ್ ಟೌನ್: ಪ್ರವಾಸಿ ಪಾಕಿಸ್ತಾನ ತಂಡವನ್ನು 2-0 ಅಂತರದಿಂದ ಬಗ್ಗು ಬಡಿದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(WTC Record) ಸರಣಿಯಲ್ಲಿ ಭಾರತದ ದಾಖಲೆಯನ್ನು ಸರಿಗಟ್ಟಿದೆ. ಸತತವಾಗಿ 7 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಭಾರತ ಜತೆ ಜಂಟಿ ದಾಖಲೆ ಹಂಚಿಕೊಂಡಿದೆ.
ಭಾರತ ತಂಡ 2019-2021ರ ಸಾಲಿನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಋತುವಿನಲ್ಲಿ ಸತತ 7 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಮೂಲಕ WTC ನಲ್ಲಿ ಸತತವಾಗಿ ಅತ್ಯಧಿಕ ಪಂಧ್ಯಗಳನ್ನು ಗೆದ್ದ ತಂಡವೆಂಬ ದಾಖಲೆಯನ್ನು ನಿರ್ಮಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ 2023-2025ರ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಸತತವಾಗಿ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಜೂನ್ 11ರಿಂದ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 3ನೇ ಆವೃತ್ತಿಯ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮುಖಾಮುಖಿಯಾಗಲಿವೆ. ದಕ್ಷಿಣ ಆಫ್ರಿಕಾಗೆ ಇದು ಚೊಚ್ಚಲ ಫೈನಲ್ ಪಂದ್ಯವಾಗಿದೆ. ಆಸೀಸ್‌ಗೆ ಇದು ಸತತ ಎರಡನೇ ಫೈನಲ್. ಕಳೆದ ಎರಡು ಬಾರಿ ಫೈನಲ್ ಪ್ರವೇಶಿಸಿದ ಭಾರತ ತಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲುವ ಮೂಲಕ ಫೈನಲ್ ಅವಕಾಶದಿಂದ ವಂಚಿತವಾಯಿತು.