Friday, 27th December 2024

100 ಮೀಟರ್ ಓಟದಲ್ಲಿ ಭಾರೀ ಸಂಚಲನ ಮೂಡಿಸಿದ 16ರ ಪೋರ

ನವದೆಹಲಿ: 16 ವರ್ಷದ ಬಾಲಕನೊಬ್ಬ ತನ್ನ ವೇಗ ಓಟದ ಮೂಲಕ ಭಾರೀ ಸಂಚಲನ ಮೂಡಿಸಿದ್ದಾನೆ. 100 ಮೀಟರ್ ಓಟದಲ್ಲಿ ಆಸ್ಟ್ರೇಲಿಯಾದ ಗೌಟ್ ಗೌಟ್(Gout Gout) ಎನ್ನುವ ಯುವ ಓಟಗಾರ ಕೇವಲ 0.46 ಸೆಕೆಂಡುಗಳಲ್ಲಿ ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ.

ಬೋಲ್ಟ್ 2009 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟವನ್ನು ಕೇವಲ 9.58 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ 18 ವರ್ಷದೊಳಗಿನವರ ಆಲ್ ಸ್ಕೂಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗೌಟ್ ಗೌಟ್ 10.04 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 0.46 ಸೆಕೆಂಡ್‌ ಅಂತರದಲ್ಲಿ ಬೋಲ್ಡ್‌ ದಾಖಲೆ ಮುರಿಯುವ ಅವಕಾಶವನ್ನು ತಪ್ಪಿಸಿಕೊಂಡರು. ಸದ್ಯ ಈ ಯುವಕನ ಓಟದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ACC U19 Asia Cup: ನಾಳೆ ಭಾರತ-ಬಾಂಗ್ಲಾ ಫೈನಲ್‌ ಫೈಟ್‌

ದುಬೈ: 8 ಬಾರಿಯ ಚಾಂಪಿಯನ್ ಭಾರತ ತಂಡ 9ನೇ ಪ್ರಶಸ್ತಿ ಇರಾದೆಯೊಂದಿಗೆ ನಾಳೆ ನಡೆಯುವ 19 ವಯೋಮಿತಿ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌(ACC U19 Asia Cup) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ಎದುರು ಪ್ರಶಸ್ತಿಗಾಗಿ ಸೆಣಸಲಿದೆ.

ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಆಯುಷ್ ,ವೈಭವ್ ಭಾರತದ ಬ್ಯಾಟಿಂಗ್‌ ಬಲವಾದರೆ, ಯುಧಾಜಿತ್‌ ಗುಹಾ ಚೇತನ್‌ ಶರ್ಮ ಮತ್ತು ಕರ್ನಾಟಕದ ಹಾರ್ದಿಕ್‌ ರಾಜ್‌ ಮತ್ತು ಕೆ.ಪಿ. ಕಾರ್ತಿಕೇಯ ಬೌಲಿಂಗ್‌ ವಿಭಾಗದ ಬಲವಾಗಿದ್ದಾರೆ. ಇವರೆಲ್ಲ ಫೈನಲ್‌ ಪಂದ್ಯದಲ್ಲಿಯೂ ಕ್ಲಿಕ್‌ ಆದರೆ ಭಾರತಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ.

ಹಾಗಂತ ಅಪಾಯಕಾರಿ ಬಾಂಗ್ಲಾದೇಶವನ್ನು ಹಗುರವಾಗಿ ಕಾಣುವಂತಿಲ್ಲ. ಕಳೆದ ವರ್ಷ ನಡೆದಿದ್ದ ಟೂರ್ನಿಯಲ್ಲಿ ಬಲಿಷ್ಠವಾಗಿದ್ದ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ತಂಡಕ್ಕೆ ಸೆಮಿ ಫೈನಲ್‌ನಲ್ಲಿ ಬಾಂಗ್ಲಾ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಭಾರತ ಎಚ್ಚರಿಕೆಯ ಆಟವಾಡುವುದು ಅಗತ್ಯ. ಬಾಂಗ್ಲಾದೇಶ ಶುಕ್ರವಾರ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ ಅಂತರದಿಂದ ಮಣಿಸಿ ಫೈನಲ್‌ ಪ್ರವೇಶಿಸಿತ್ತು. ಭಾರತ ತಂಡ ಶ್ರೀಲಂಕಾ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು.