ಶಾರ್ಜಾ: ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 149ರನ್ ಕಲೆ ಹಾಕಿತು. ನಾಯಕ ರೋಹಿತ್ ಶರ್ಮಾ 4, ಕ್ವಿಂಟನ್ ಡಿಕಾಕ್ 25, ಸೂರ್ಯಕುಮಾರ್ ಯಾದವ್ 36, ಇಶನ್ ಕಿಶನ್ 33 ರನ್‌ಗಳಿಸಿ ಔಟಾದರು. ಕೆಳಕ್ರಮಾಂಕ ದಲ್ಲಿ ಅಬ್ಬರಿಸಿ ತಂಡಕ್ಕೆ ನೆರವಾದ ಪೊಲಾರ್ಡ್ 25 ಎಸೆತಗಳಲ್ಲಿ 41 ರನ್ ಸಿಡಿಸಿ ಜೇಸನ್ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ರೋಹಿತ್ ಪಡೆ ನೀಡಿದ 150 ರನ್‌ಗಳ ಗುರಿ ಬೆನ್ನಟ್ಟಿದ ಎಸ್‌ಆರ್‌ಎಚ್ ಯಾರೂ ಊಹಿಸದ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿತು.
ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಸಾಹಾ ವಿಕೆಟ್ ಕೈ ಚೆಲ್ಲದೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ 10 ವಿಕೆಟ್‌ಗಳ ಭರ್ಜರಿ ಗೆಲುವನ್ನು ತಂದುಕೊಟ್ಟರು.
ವಾರ್ನರ್ 58 ಎಸೆತಗಳಲ್ಲಿ ಅಜೇಯ 85 ರನ್ ಸಿಡಿಸಿದರೆ, ಸಾಹಾ 45 ಎಸೆತಗಳಲ್ಲಿ ಅಜೇಯ 58 ರನ್‌ಗಳಿಸಿ ತಂಡಕ್ಕೆ 10 ವಿಕೆಟ್ ಗಳ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದ್ರಾಬಾದ್ ಪ್ಲೇ ಆಫ್ ಪ್ರವೇಶಿಸಿದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿದೆ.
ಪ್ಲೇ ಆಫ್ ಪ್ರವೇಶಿಸಿದ ಸನ್‌ರೈಸರ್ಸ್ ಹೈದ್ರಾಬಾದ್ ನ.6ರಂದು ಅಬುಧಾಬಿಯಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಆರ್‌ಸಿಬಿ ತಂಡವನ್ನು ಎದುರಿಸಲಿದೆ.