Sunday, 15th December 2024

ಶ್ರೀಕರ್‌ ಭರತ್‌ ’ಹಿರೋಪಂಥಿ’: ರೋಚಕ ಜಯ ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ದುಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ ನ ಕೊನೆಯ ಎಸೆತಕ್ಕೆ ಐದು ರನ್‌ ಗಳ ಅಗತ್ಯವಿದ್ದಾಗ ಸಿಕ್ಸರ್‌ ಬಾರಿಸಿದ ಶ್ರೀಕರ್‌ ಭರತ್‌ ಪಂದ್ಯದ ಪ್ರಮುಖ ಆಕರ್ಷಣೆಯಾದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ 164 ರನ್‌ ಗುರಿಯನ್ನು ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ತಂಡ ಆರಂಭಿಕ ಆಘಾತಕ್ಕೊಳಗಾದರೂ ಶ್ರೀಕರ್‌ ಭರತ್‌ (78) ಹಾಗೂ ಗ್ಲೆನ್‌ ಮ್ಯಾಕ್ಸ್‌ ವೆಲ್‌ (51) ರನ್‌ ಗಳ ನೆರವಿನಿಂದ ಗುರಿ ಮುಟ್ಟಿತು. ಆವೇಶ್‌ ಖಾನ್‌ ಎಸೆದ ಕೊನೆಯ ಎಸೆತದಲ್ಲಿ ಐದು ರನ್‌ ಗಳ ಅವಶ್ಯಕತೆಯಿದ್ದಾಗ ಚೆಂಡನ್ನು ಸಿಕ್ಸರ್‌ ಗಡಿ ದಾಟಿಸಿದ ಶ್ರೀಕರ್‌ ಭರತ್‌ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಗ್ರಸ್ಥಾನದಲ್ಲಿದ್ದು, ರಾಯಲ್‌ ಚಾಲೆಂಜರ್ಸ್‌ ತಂಡವೂ ಪ್ಲೇ ಆಫ್‌ ಗೆ ಈಗಾಗಲೇ ಆಯ್ಕೆಯಾಗಿದೆ.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ (78*ರನ್) ಲಾಂಗ್ ಆನ್‌ನತ್ತ ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸುವ ಮೂಲಕ ಐಪಿಎಲ್-14ರ ಪ್ಲೇಆಫ್​ ಕಾದಾಟಕ್ಕೆ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ.

ಆವೇಶ್ ಖಾನ್ ಎಸೆದ ಕಡೇ ಓವರ್‌ನಲ್ಲಿ 15 ರನ್ ಬೇಕಿತ್ತು. ಮ್ಯಾಕ್ಸ್‌ವೆಲ್ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಸಹಿತ 6 ರನ್ ಕಸಿದರೆ, 3ನೇ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್ ಬಂತು. 4ನೇ ಎಸೆತಕ್ಕೆ ರನ್ ಇಲ್ಲ. 5ನೇ ಎಸೆತದಲ್ಲಿ 2 ರನ್. ಮರು ಎಸೆತ ವೈಡ್. ಬಳಿಕ ಕೊನೇ ಎಸೆತದಲ್ಲಿ ಭರತ್ ಸಿಕ್ಸರ್ ಚಚ್ಚಿದರು.

ಆರ್‌ಸಿಬಿ ಮೊತ್ತ 6 ರನ್ ಆಗುವಷ್ಟರಲ್ಲೇ ಆರಂಭಿಕರಾದ ದೇವದತ್ ಪಡಿಕಲ್ (0) ಮತ್ತು ನಾಯಕ ವಿರಾಟ್ ಕೊಹ್ಲಿ (4) ಡಗೌಟ್ ಸೇರಿದ್ದರೆ, ಎಬಿ ಡಿವಿಲಿಯರ್ಸ್‌ (26) ತುಸು ಚೇತರಿಕೆ ನೀಡಿ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಔಟಾದರು. ಆಗ ಜತೆಗೂಡಿದ ಕೆಎಸ್ ಭರತ್ ಮತ್ತು ಮ್ಯಾಕ್ಸ್‌ವೆಲ್ ಮುರಿಯದ 4ನೇ ವಿಕೆಟ್‌ಗೆ 63 ಎಸೆತಗಳಲ್ಲಿ 111 ರನ್ ಸೇರಿಸಿ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ವೇಗಿಗಳಿಗೆ ನೆರವಾಗುವ ಪಿಚ್‌ನಲ್ಲಿ ಧವನ್ ಹಾಗೂ ಪೃಥ್ವಿ ಪರಸ್ಪರ ಪೈಪೋಟಿಗಿಳಿದವರಂತೆ ಬ್ಯಾಟ್ ಬೀಸಿದರು. ಈ ಜೋಡಿಯನ್ನು ಬೇರ್ಪಡಿಸಲು ಕೊಹ್ಲಿ ಪದೆ ಪದೇ ಬೌಲರ್‌ಗಳನ್ನು ಬದಲಿಸಿದರೂ ಪ್ರಯೋಜನ ವಾಗಲಿಲ್ಲ. ಧವನ್-ಪೃಥ್ವಿ ಜೋಡಿ 62 ಎಸೆತಗಳಲ್ಲಿ 88 ರನ್ ಜತೆಯಾಟವಾಡಿತು. ಧವನ್ ವಿಕೆಟ್ ಕಬಳಿ ಸುವ ಮೂಲಕ ವೇಗಿ ಹರ್ಷಲ್ ಪಟೇಲ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಇದರ ಬೆನ್ನಲ್ಲೇ ಚಾಹಲ್ ಎಸೆತದಲ್ಲಿ ಪೃಥ್ವಿ ಷಾ ಕೂಡ ನಿರ್ಗಮಿಸಿದರು.  ಬಳಿಕ ಬಂದ ನಾಯಕ ರಿಷಭ್ ಪಂತ್ (10), ಶ್ರೇಯಸ್ ಅಯ್ಯರ್ (18) ನಿರಾಸೆ ಅನುಭವಿಸಿದರೆ, ಶಿಮ್ರೋನ್ ಹೆಟ್ಮೆಯೆರ್ (29ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಲವಾಗಿ ಡೆಲ್ಲಿ ತಂಡದ ಮೊತ್ತ 160ರ ಗಡಿ ದಾಟಿತು.