Thursday, 12th December 2024

ಇಪ್ಪತ್ತು ವರ್ಷವಾದ್ರೂ ಕನಸಿನ ಜ್ವಾಲೆ ಕುಂದಿಸದ ಸೂರ್ಯ

ವಾರದ ತಾರೆ: ಸೂರ್ಯ ಕುಮಾರ್‌ ಯಾದವ್‌

ವಿಶೇಷ ಲೇಖನ: ವಿರಾಜ್ ಕೆ.ಅಣಜಿ

ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು ಬ್ಯಾಟು-ಬಾಲು ಆಡುವ ಚಿಕ್ಕ ಹುಡುಗರಿಂದ್ದಾಗಲೇ ಆರಂಭವಾಗುವ ಕನಸು, ಹಂಬಲ. ಆದರೆ, ಅದು ಸುಲಭವಲ್ಲ, ಅಂದುಕೊಂಡ ತಕ್ಷಣ ಆಗುವಂತದ್ದೂ ಅಲ್ಲ. ಅದಕ್ಕಾಗಿ ಹಲವರು ಕಾಯುತ್ತಾರೆ, ಶ್ರಮ ಪಡುತ್ತಾರೆ. ಆದರೆ, ಇಪ್ಪತ್ತು ವರ್ಷ ಕಾದು, ಹಟಬಿಡದೇ ಭಾರತದ ಜೆರ್ಸಿ ತೊಟ್ಟ ಹೀರೋ ಕತೆಯಿದು.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಇರುವವರು ನಿರಂತರವಾಗಿ ಪ್ರಯತ್ನದಲ್ಲಿ ತೊಡಗಿರಬೇಕು.
ಏಕೆಂದರೆ, ತನ್ನದೆಂಬ ಸಮಯ ಯಾವಾಗ, ಹೇಗೆ, ಯಾರ ರೂಪದಲ್ಲಿ ಬರಬಹುದು ಎಂಬುದನ್ನು ಹೇಳಲಾಗದು. ‘ಆ ಕ್ಷಣ’
ನಾವು ಪ್ರಯತ್ನಿಸದೇ ಮೈಮರೆತಿದ್ದರೆ, ನಮ್ಮ ಪಾಲಿಗೆ ಬಂದಿದ್ದ ಆ ಅಮೂಲ್ಯ ಸದಾವಕಾಶ ಕೈ ತಪ್ಪಿಹೋಗುತ್ತದೆ.

ಹೀಗಾಗಿ ನಿರಂತರ ಪ್ರಯತ್ನ, ನಂಬಿಕೆ, ಕಾಯುವಿಕೆ ಮೈಗೂಡಿಸಿಕೊಂಡಿರಲೇಬೇಕು, ಇದು ಸಾಧಕನಾಗುವ ಹಂಬಲ ಹೊಂದಿದವರಿಗೆ ಮೊದಲ ಪಾಠ ಎಂಬ ಮಾತಿದೆ. ಈ ಎಲ್ಲ ಪಾಠ ಅರಿತು, ಕಲಿತು ತನ್ನ ಸಮಯ ಬಂದಾಗ ತಾನೇನು ಎಂದು ಸಾಬೀತು ಮಾಡುತ್ತಿರುವುದು ಭಾರತ ಕ್ರಿಕೆಟ್ ತಂಡದ ಹೊಸ ಬ್ಯಾಟಿಂಗ್ ಸೆನ್ಸೇಷನ್ ಸೂರ್ಯಕುಮಾರ್ ಯಾದವ್.

ಮೂಲತ ಉತ್ತರ ಪ್ರದೇಶದ ಘಾಜಿಪುರದವರಾದ ಸೂರ್ಯ, ತನ್ನ ತಂದೆಯ ಕೆಲಸದ ನಿಮಿತ್ತ ಮುಂಬೈಗೆ ವಲಸೆ ಬಂದಾಗ ಆರೇಳು ವರ್ಷದ ಹುಡುಗ. ಎಲ್ಲ ಮಕ್ಕಳಂತೆ ಆಟದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಸೂರ್ಯ ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ಎರಡರಲ್ಲೂ ಆಸಕ್ತಿ, ಪ್ರೀತಿ ಹೊಂದಿದ್ದರು. ಆಟದ ಬಗ್ಗೆ ತಮ್ಮ ಮಗನಲ್ಲಿದ್ದ ಆಸಕ್ತಿ ಕಂಡು ತಂದೆ ಅಶೋಕ್ ಕುಮಾರ್ ಯಾದವ್, ಎರಡೂ ಆಟ ಆಡುವುದು, ಕಲಿಯುವುದು ಕಷ್ಟ ಹಾಗೂ ಏಕಾಗ್ರತೆ ಕೊರತೆ ಉಂಟಾಗಬಹುದು. ನಿನಗಿಷ್ಟದ ಒಂದು
ಆಟದಲ್ಲೇ ಮುಂದುವರಿ ಎಂದು ಸಲಹೆ ನೀಡಿದ್ದರಂತೆ.

ಆ ಮಾತಿನ ಶಕ್ತಿಗೋ, ಮುಂಬೈನಲ್ಲಿರುವ ಕ್ರಿಕೆಟ್ ಕ್ರೇಜಿಗೋ ಸೂರ್ಯ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡರು. ಅಲ್ಲಿಂದ ಒಂದೇ ತಪ್ಪಸ್ಸು, ಕನಸು, ತ್ಯಾಗ, ಕಾಯುವಿಕೆ ಎಲ್ಲವೂ ಭಾರತ ತಂಡಕ್ಕಾಗಿ ಆಡಬೇಕು ಎಂಬುದಷ್ಟೇ. ಆದರೆ, ಆ ಕನಸು ನನಸಾಗಲು ಆತ ಕಾದದ್ದು ಬರೋಬ್ಬರಿ ಇಪ್ಪತ್ತು ವರ್ಷಗಳು ಎಂಬುದು ಬೇಸರ ಹಾಗೂ ಅಚ್ಚರಿಯ ಸಂಗತಿ.

ಮೊನ್ನೆ ಮೊನ್ನೆಯಷ್ಟೇ ಭಾರತ-ಇಂಗ್ಲೆೆಂಡ್ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲ ಬಾರಿ ಭಾರತದ ಪರವಾಗಿ ಸೂರ್ಯ
ಪದಾರ್ಪಣೆ ಮಾಡಿದಾಗ ಅವರಿಗೆ ಹತ್ತಿರತ್ತಿರ ಮೂವತ್ತು ವರ್ಷದ ಆಜುಬಾಜು. ಅಂದರೆ, ನೀವೇ ಅಂದಾಜಿಸಿ, ಯಾವುದೇ ವ್ಯಕ್ತಿಯ ಕಾಯುವಿಕೆ, ತಾಳ್ಮೆಯ ಮಿತಿ ಎಷ್ಟಿರಬಹುದು, ಹಾಗೂ ಇಷ್ಟು ವರ್ಷ ಅದೇಗೆ ಒಂದೇ ನಂಬಿಕೆಯಿಂದ ಕಾದಿರಬಹುದು. ತನ್ನ ಯೌವನವೇ ಕಳೆದು ಹೋಗುತ್ತಿದ್ದರೂ, ತಾನೊಂದು ದಿನ ಭಾರತದ ಜೆರ್ಸಿ ತೊಡಲೇಬೇಕು ಎಂಬ ಹಟವನ್ನು ಇಪ್ಪತ್ತು ವರ್ಷಗಳವರೆಗೆ ಹೊತ್ತು ತಂದ ಸೂರ್ಯನ ಇಚ್ಛಾಶಕ್ತಿ ಹೇಗಿರಬಹುದು.

ಆದರೆ, ಲಕ್ ಫ್ಯಾಕ್ಟರ್ ಸೂರ್ಯನಿಗೆ ಮತ್ತೆ ಕೈಕೊಟ್ಟಿತು. ಅಷ್ಟು ವರ್ಷ ಕಾದು ತಾನಾಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೂರ್ಯನಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಮುಂದಿನ ಪಂದ್ಯದಲ್ಲಿ ಮತ್ತೆ ಬೆಂಚ್ ಕಾಯಬೇಕಾಗಿ ಬಂತು. ಆದರೂ ಸೂರ್ಯ ತಣ್ಣಗಾಗಿರಲಿಲ್ಲ. ಸರಣಿಯ ನಾಲ್ಕನೇ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾಗ ತಂಡದೊಳಕ್ಕೆ ಬಂದರು. ಅಂದು ನಾಯಕ ಕೊಹ್ಲಿ ಭರವಸೆ ಇಟ್ಟು ಒನ್‌ಡೌನ್ ಆಡಲು ಸೂರ್ಯನಿಗೆ ಅವಕಾಶ ಕೊಟ್ಟಾಗ ಅಲ್ಲಿಂದ ಆಗಿದ್ದೆ ಲ್ಲವೂ ಮ್ಯಾಜಿಕಲ್ ಮತ್ತು ಮರೆಯಲಾರದ್ದು. ಇಷ್ಟು ವರ್ಷ ಕಾದಿದ್ದ ಕ್ಷಣ ಎದುರು ಬಂದು ನಿಂತಾಗಿ, ಸೂರ್ಯ ಎದೆಯುಬ್ಬಿಸಿ ನಿಂತಿದ್ದರು.

ತಾನು ಎದುರಿಸಿದ ಮೊದಲ ಬಾಲ್‌ನಲ್ಲಿ ಭರ್ಜರಿ ಸಿಕ್ಸರ್ ಎತ್ತುವ ಮೂಲಕ ಕ್ರಿಕೆಟ್ ಜಗತ್ತಿಗೆ ಹೊಸ ಸೂರ್ಯನೊಬ್ಬ ಉದಯ ವಾಗಿದ್ದಾನೆ ಎಂಬ ಸಂದೇಶ ಕೊಟ್ಟಿದ್ದರು. ಅರ್ಧಶತಕ ಸಿಡಿಸಿ, ತಂಡ ಗೆಲ್ಲಲು ಅತ್ಯಮೂಲ್ಯ ಕಾಣಿಕೆ ನೀಡಿ, ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಪ್ರಯತ್ನ ಪಡುತ್ತಲೇ ಇರು, ನಿನ್ನ ಸಮಯ ಬಂದಾಗ ನೀನೇನೆಂಬುದ ತೋರಿಸು ಎಂಬ ಮಾತಿನ ಉದಾಹರಣೆ ಅದಾಗಿತ್ತು.

2010ರಲ್ಲಿ ದೆಹಲಿ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿದ್ದ ಸೂರ್ಯ, ತಮ್ಮ ಉತ್ತಮ ಆಟದಿಂದಾಗಿ ಮುಂಬೈಗೆ ನಾಯಕನಾದರು. 23 ವರ್ಷದೊಳಗಿನವರ ಟೂರ್ನಿಯಲ್ಲಿ 2011-12ರ ಸಾಲಿನಲ್ಲಿ ಭರ್ಜರಿ ಆಟದ
ಮೂಲಕ ಸೂರ್ಯ ಸದ್ದು ಮಾಡಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿ ದಾಖಲೆ ಬರೆದಿದ್ದರು. ಅದೇ ವರ್ಷದಲ್ಲಿ ಒಡಿಶಾ
ವಿರುದ್ಧ ದ್ವಿಶತಕ ಬಾರಿಸಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಮೊದಲ ಲಿಸ್ಟ್-ಎ ಪಂದ್ಯದ ಪದಾರ್ಪಣೆಯಲ್ಲೇ ಗಮನ ಸೆಳೆದಿದ್ದರು.

2018ರಲ್ಲಿ ಇಂಡಿಯಾ ಎ ತಂಡಕ್ಕೂ ಆಯ್ಕೆಯಾದರು. ಅವರ ಭರ್ಜರಿ ಆಟದ ಮೂಲಕವೇ ಕೊಲ್ಕತ್ತಾ ನೈಟ್ ರೈಡರ‍್ಸ್‌, ಮುಂಬೈ ಇಂಡಿಯನ್ಸ್ ತಂಡಕ್ಕೂ ಅವಿಭಾಜ್ಯ ಅಂಗವಾಗಿ ಸೂರ್ಯ ಆಟವಾಡಿದ್ದಾರೆ. ಇಷ್ಟೆಲ್ಲ ಚೆಂದದ ಆಟಗಾರನಾದರೂ, ಧೋನಿ, ಯುವರಾಜ್ ಸಿಂಗ್, ರೈನಾರಂತಹ ದಿಗ್ಗಜರಿಂದಾಗಿ ತಂಡಕ್ಕೆ ಸೇರಿಕೊಳ್ಳಲು ಮಾತ್ರ ಅವಕಾಶ ಕೂಡಿಬರಲೇ ಇಲ್ಲ ಎಂಬುದು ವಿಪರ್ಯಾಸ.

ಇಷ್ಟೆಲ್ಲ ಕಾಯುವಿಕೆ ಸೂರ್ಯಕುಮಾರ್ ಅವರನ್ನು ಅಸಾಧಾರಾಣ ಬ್ಯಾಟ್ಸ್‌‌ಮನ್ ಆಗಿ ರೂಪಿಸಿದೆ. ಒತ್ತಡವನ್ನು ನಿಭಾಯಿಸುವ
ಕಲೆ ಕರಗತವಾಗಿದೆ. ತಂಡ ಬಿಕ್ಕಟ್ಟಿನಲ್ಲಿ ಸಿಲುಕಿದಾಗ ಹೇಗೆ ಶಾಂತವಾಗಿ ನಿಭಾಯಿಸಬೇಕು ಎಂಬ ಕಲೆ ಒಲಿದಿದೆ. ಇದನ್ನೆಲ್ಲ
ಅವರು ದುಬೈನಲ್ಲಿ ನಡೆದ ಐಪಿಎಲ್‌ನ ಮೂಲಕ ಸಾಬೀತು ಮಾಡಿದ್ದರು. ಇನ್ನು ಸೂರ್ಯಕುಮಾರ್ ಅವರನ್ನು ಹೊರಗಿಟ್ಟರೆ
ಭಾರತ ತಂಡಕ್ಕೆ ನಷ್ಟ ಎಂಬುದು ಬಿಸಿಸಿಐಗೆ ಆಗಲೇ ಮನವರಿಕೆ ಆಗಿತ್ತು. ಆದ್ದರಿಂದಲೇ ಇಂಗ್ಲೆಂಡ್ ವಿರುದ್ಧದ ಚುಟುಕು,  ಏಕದಿನ ಸರಣಿಗೂ ಆಯ್ಕೆ ಮಾಡಿತು.

ಸೂರ್ಯ ಇನ್ನು ಕನಿಷ್ಠ ಐದಾರು ವರ್ಷ ಬ್ಯಾಟ್ ಬೀಸಬಲ್ಲರು. ಅಷ್ಟರೊಳಗೆ ತನ್ನಲ್ಲಿ ಇರುವ ರನ್ ಹಸಿವನ್ನು ನೀಗಿಸಿಕೊಳ್ಳುವ ಎಲ್ಲ ಸೂಚನೆಯನ್ನೂ ಸೂರ್ಯ ನೀಡುತ್ತಿದ್ದು, ಅದಕ್ಕೆ 5ನೇ ಟಿ20 ಪಂದ್ಯವೂ ಸಾಕ್ಷಿ. ಅವರಿಗೆ ಶುಭವಾಗಲಿ.