ಲಕ್ನೋ: ಪ್ರಶಸ್ತಿ ಬರ ನೀಗಿಸುವ ತವಕದಲ್ಲಿರುವ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ. ಈ ಮೂಲಕ ವರ್ಷಾಂತ್ಯದಲ್ಲಿ ಪ್ರಶಸ್ತಿಯೊಂದನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಲಕ್ಷ್ಯ ಸೇನ್ ಕೂಡ ಕ್ವಾರ್ಟರ್ ಫೈನಲಿಗೇರಿದರು.
ಕಳೆದ ಕೆಲ ವರ್ಷಗಳಿಂದ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಕಳಪೆ ಪ್ರದರ್ಶನ ತೋರುವ ಮೂಲಕ ನಿರಾಸೆ ಕಾಣುತ್ತಿದ್ದ ಸಿಂಧು, ವಿಶ್ವದ 147ನೇ ರ್‍ಯಾಂಕಿನ ಇರಾ ಶರ್ಮ ವಿರುದ್ಧ ಪ್ರಬಲ ಹೋರಾಟ ನಡೆಸಿ 21-15, 13-21, 21-7 ಗೇಮ್‌ಗಳಿಂದ ಗೆದ್ದರು. ಉಭಯ ಆಟಗಾರ್ತಿಯರ ಮೂರು ಗೇಮ್‌ಗಳ ಮ್ಯಾರಥಾನ್ ಹೋರಾಟ 53 ನಿಮಿಷಗಳಲ್ಲಿ ಅಂತ್ಯ ಕಂಡಿತು. ಇಂದು ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು ಚೀನದ ದೈ ವಾಂಗ್ ಅವರನ್ನು ಎದುರಿಸಲಿದ್ದಾರೆ.
ಲಕ್ಷ್ಯ ಸೇನ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಡ್ಯಾನಿಲ್ ದುಬೊವೆಂಕೊ ಅವರನ್ನು 21-14, 21-13 ಗೇಮ್‌ಗಳಿಂದ ಸುಲಭವಾಗಿ ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದರು. ಮುಂದಿನ ಪಂದ್ಯದಲ್ಲಿ ಮೈರಬ ಲುವಾಂಗ್ ಅವರನ್ನು ಸೇನ್ ಎದುರಿಸಲಿದ್ದಾರೆ. ಈ ಪಂದ್ಯ ಕೂಡ ಇಂದೇ ನಡೆಯಲಿದೆ. ಲುವಾಂಗ್ ದಿನದ ಮತ್ತೊಂದು ಪಂದ್ಯದಲ್ಲಿ ಐರ್ಲೆಂಡಿನ ಎನ್‌ಹಾಟ್ ಎನ್‌ಗುಯೆನ್ ಅವರನ್ನು ಸೋಲಿಸಿದ್ದರು. ಮಹಿಳಾ ಡಬಲ್ಸ್ ಪಂದ್ಯದಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಭಾರತೀಯರೇ ಆದ ಅಶ್ವಿನಿ ಭಟ್ ಕೆ. ಮತ್ತು ಶಿಖಾ ಗೌತಮ್ ಅವರನ್ನು 21-13, 21-10 ಗೇಮ್‌ಗಳಿಂದ ಮಣಿಸಿ ಮುಂದಿನ ಹಂತಕ್ಕೇರಿದರು.
ಇದನ್ನೂ ಓದಿ Bajrang Punia: ನಿಷೇಧ ಶಿಕ್ಷೆ ಬಿಜೆಪಿಯ ಪಿತೂರಿ ಎಂದ ಬಜರಂಗ್ ಪೂನಿಯಾ
ಪಾಕ್ ತಂಡಕ್ಕೂ ಭಾರತದಲ್ಲಿ ಆಡಲು ಸಾಧ್ಯವಿಲ್ಲ; ಪಿಸಿಬಿ ಮುಖ್ಯಸ್ಥ
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ(PCB chief Naqvi), ಭಾರತವು ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದರೆ, ಪಾಕಿಸ್ತಾನ ತಂಡ ಕೂಡ ಮುಂದೆ ಭಾರತಕ್ಕೆ ಪ್ರಯಾಣಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.
ಪಾಕ್ ಮಾಧ್ಯಮದ ಜತೆ ಮಾತನಾಡಿದ ಮೊಹ್ಸಿನ್ ನಖ್ವಿ, ಭದ್ರತೆಯ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ಬಾರದೇ ಇದ್ದರೆ ನಾವು ಕೂಡ ಮುಂದಿನ ದಿನಗಳಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಟೂರ್ನಿಯ ಪಂದ್ಯವನ್ನಾಡಲು ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ. ನಮಗೂ ಭದ್ರತೆಯ ಕೊರತೆ ಕಾಡಲಿದೆʼ ಎಂದು ಹೇಳಿದ್ದಾರೆ.