ದುಬೈ: ಪ್ರಸಕ್ತ ವರ್ಷದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಬರುವ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೂ ನಡೆಯಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ ಪ್ರಕಟಿಸಿದೆ.
‘ಬಿಸಿಸಿಐ ಟೂರ್ನಿಯ ಆಯೋಜನೆ ಮುಂದುವರಿಸಲಿದ್ದು, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್ ಝಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮಾನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ 2021ರ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೂ ಟಿ20 ವಿಶ್ವಕಪ್ ಕ್ರಿಕೆಟ್ ನಡೆಯಲಿದೆ
ಅರ್ಹತೆಗಾಗಿ ಎಂಟು ತಂಡಗಳು ಟೂರ್ನಿಯ ಮೊದಲ ಸುತ್ತಿನಲ್ಲಿ ಸೆಣಸಲಿವೆ. ಒಮಾನ್ ಮತ್ತು ಯುಎಇ ಎರಡೂ ಕಡೆ ಆರಂಭಿಕ ಸುತ್ತಿನ ಪಂದ್ಯಗಳು ನಡೆಯ ಲಿವೆ. ಈ ಪೈಕಿ ನಾಲ್ಕು ತಂಡಗಳು ‘ಸೂಪರ್ 12’ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಆ ತಂಡಗಳು, ಅರ್ಹತೆ ಗಳಿಸಿರುವ 8 ತಂಡಗಳೊಂದಿಗೆ ಸೇರಲಿವೆ. ನವೆಂಬರ್ 14ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಭಾರತದಲ್ಲಿ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್, ಸ್ಕಾಟ್‌ಲೆಂಡ್, ನಮೀಬಿಯಾ, ಒಮಾನ್ ಹಾಗೂ ಪಪುವಾ ನ್ಯೂ ಗ್ಯುನಿಯಾ ತಂಡಗಳು ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೆಣಸಲಿವೆ.